ಬೆಂಗಳೂರು: ಚಿನ್ನದ ವ್ಯಾಪಾರಿ ಮನೆಯಲ್ಲಿ ಕೆಲಸಕ್ಕಿದ್ದ ವ್ಯಕ್ತಿ ನಗದು, ಚಿನ್ನಾಭರಣ ಸೇರಿದಂತೆ ಬರೋಬ್ಬರಿ 15.15 ಕೋಟಿ ಮೌಲ್ಯದ ವಸ್ತುಗಳನ್ನು ದೋಚಿ ಪರಾರಿಯಾದ ಘಟನೆ ವಿಜಯನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಅರಿಹಂತ್ ಜ್ಯುವೆಲ್ಲರ್ಸ್ ಮಾಲೀಕ ಸುರೇಂದ್ರ ಕುಮಾರ್ ಜೈನ್ ಅವರ ಮನೆಯಲ್ಲಿ ಕಳ್ಳತನ ನಡೆದಿದ್ದು, ನೇಪಾಳ ಮೂಲದ ನಮ್ರಾಜ್ ಎಂಬಾತನ ವಿರುದ್ಧ ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುರೇಂದ್ರ ಕುಮಾರ್ ಜೈನ್ ಅವರ ಅರಿಹಂತ್ ಜ್ಯುವೆಲ್ಲರ್ಸ್ ಶಾಪ್ ನಲ್ಲಿ ನೇಪಾಳ ಮೂಲದ ನಮ್ರಾಜ್ 6 ತಿಂಗಳಿನಿಂದ ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡಿಕೊಂಡಿದ್ದ. ಉಳಿದುಕೊಳ್ಳಲು ಮನೆ ವ್ಯವಸ್ಥೆ ಇರದ ನಮ್ರಾಜ್ ನಿಗೆ ಸುರೇಂದ್ರ ಕುಮಾರ್ ಜೈನ್ ತಮ್ಮದೇ ಮನೆಯಲ್ಲಿ ಒಂದು ರೂಮ್ ಸಹ ನೀಡಿದ್ದರು.
ಸೆಕ್ಯೂರಿಟಿ ಗಾರ್ಡ್ ಕೆಲಸದ ಜೊತೆಗೆ ಸುರೇಂದ್ರ ಕುಮಾರ್ ಜೈನ್ ಅವರ ಮನೆಯ ಗಾರ್ಡನ್‌ನಲ್ಲಿ ಗಿಡಗಳಿಗೆ ನೀರು ಹಾಕುವುದು ಸೇರಿದಂತೆ ಸಣ್ಣಪುಟ್ಟ ಕೆಲಸಗಳನ್ನು ನಮ್ರಾಜ್ ಮಾಡಿಕೊಂಡಿದ್ದ. ನವೆಂಬರ್ 1ರಂದು ಜಾತ್ರೆಯ ನಿಮಿತ್ತ ಸುರೇಂದ್ರ ಕುಮಾರ್ ಜೈನ್ ಅವರ ಕುಟುಂಬ ಗುಜರಾತ್‌ನ ಗಿರ್ನಾರಿಗೆ ತೆರಳಿತ್ತು.
ಈ ವೇಳೆ ಮನೆಯಲ್ಲಿದ್ದ ಚಿನ್ನಾಭರಣ ನಗದು ಸೇರಿದಂತೆ ಸುಮಾರು 15.15 ಕೋಟಿ ಮೌಲ್ಯದ ವಸ್ತುಗಳನ್ನು ದೋಚಿರುವ ನಮ್ರಾಜ್ ಪರಾರಿಯಾಗಿದ್ದಾನೆ. ನವೆಂಬರ್ 7ರಂದು ಸುರೇಂದ್ರ ಕುಮಾರ್ ಜೈನ್ ಅವರ ಕುಟುಂಬ ಮನೆಗೆ ಮರಳಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.
ತಕ್ಷಣ ವಿಜಯನಗರ ಪೊಲೀಸ್ ಠಾಣೆಗೆ ಸುರೇಂದ್ರ ಕುಮಾರ್ ಜೈನ್ ದೂರು ನೀಡಿದ್ದು, ಘಟನಾ ಸ್ಥಳಕ್ಕೆ ಪಶ್ಚಿಮ ವಿಭಾಗದ ಡಿಸಿಪಿ ಎಸ್. ಗಿರೀಶ್, ವಿಜಯನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿಜಯನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಆರೋಪಿ ಪತ್ತೆಗಾಗಿ ಹುಡುಕಾಟ ಆರಂಭಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.