ಬೆಂಗಳೂರು : ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಖಡಕ್ ಸೂಚನೆ ಬೆನ್ನೆಲ್ಲೆ ಎಚ್ಚೆತ್ತ ನಗರ ಪೊಲೀಸರು ಪತ್ತೆ ಆಗದೆ ಮೂಲೆಯಲ್ಲಿ ದೂಳು ಹಿಡಿದಿದ್ದ ಪ್ರಕರಣಗಳನ್ನು ರಿ ಓಪನ್ ಮಾಡಲಾಗಿದೆ. ವರ್ಷಾನುಗಟ್ಟಲೇ ಪತ್ತೆಯಾಗದ ಹಳೆಯ ಪ್ರಕರಣಗಳು ಒಂದೇ ವಾರದಲ್ಲಿ 20 ಪತ್ತೆಯಾಗಿವೆ. ಈ ಎಲ್ಲ ಪ್ರಕರಣಗಳನ್ನು ಪತ್ತೆ ಹಚ್ಚಿ, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. 15, 20, 24 ವರ್ಷದ ಹಳೇ ಪ್ರಕರಣಗಳನ್ನು ಕೂಡ ರಿ ಓಪನ್ ಮಾಡಲಾಗಿದೆ.
ಈ ವಾರದಲ್ಲಿ ಪತ್ತೆಯಾದ ಹಳೇ ಪ್ರಕರಣಗಳು
ಕೇಸ್ ನಂ1: 2015ರಲ್ಲಿನ ಅತ್ಯಾಚಾರ ಪ್ರಕರಣದ ಆರೋಪಿ ಜಿಬ್ರಾನ್ ಪಾಷ್ನನ್ನು ಸುದ್ದುಗುಂಟೆಪಾಳ್ಯ ಠಾಣೆ ಪೊಲೀಸರು 9 ವರ್ಷಗಳ ಬಳಿಕ ಬಂಧಿಸಿದ್ದಾರೆ.
ಕೇಸ್ ನಂ 2: 2014ರಲ್ಲಿನ ಪೋಕ್ಸೋ ಪ್ರಕರಣದ ಎ2 ಜಯಲಕ್ಷಿ ಎಂಬಾಕೆಯನ್ನು ಒಂಬತ್ತು ವರ್ಷಗಳ ಬಳಿಕ ಸದ್ದುಗುಂಟೆಪಾಳ್ಯ ಪೊಲೀಸರು ಬಂಧಿಸಿದ್ದಾರೆ.
ಕೇಸ್ ನಂ 3: 2018ರ ಆರ್ಟಿ ನಗರದ ವಂಚನೆ ಪ್ರಕರಣದ ಪ್ರಮುಖ ಆರೋಪಿ ಜಾವೀದ್ನನ್ನು ಆರ್ ಟಿ ನಗರ ಠಾಣೆ ಪೊಲೀಸರು ಐದು ವರ್ಷಗಳ ಬಳಿಕ ಬಂಧಿಸಿದ್ದಾರೆ.
ಕೇಸ್ ನಂ 4: ತಿಲಕ್ ನಗರದ ಮನೆಗಳ್ಳತನದ ಆರೋಪಿ ಜಬಿಯನ್ನು ಪೊಲೀಸರು ಬಂಧಿಸಿದ್ದಾರೆ. ಈತ ಕಳೆದ 24 ವರ್ಷಗಳಿಂದ ತಲೆ ಮರೆಸಿಕೊಂಡಿದ್ದನು.
ಕೇಸ್ ನಂ 5: 2018 ರಿಂದ ತಲೆಮರೆಸಿಕೊಂಡಿದ್ದ ಸೈಯದ್ ಮಜಾಫಿರ್ ಅಹಮದ್ನನ್ನು ಆಡುಗೋಡಿ ಪೊಲೀಸ್ ಠಾಣೆ ಪೊಲೀಸರು ಐದು ವರ್ಷಗಳಿಂದ ಬಳಿಕ ಬಂಧಿಸಿದ್ದಾರೆ.
ಕೇಸ್ ನಂ 6: ಭಾರತಿ ನಗರದ ಕುಟುಂಬ ಕಲಹ ಪ್ರಕರಣದ ಆರೋಪಿ ಅಶೋಕ್ 2005 ರಿಂದಲೂ ತಲೆಮರೆಸಿಕೊಂಡಿದ್ದು, ಇದೀಗ ಪೊಲೀಸರು ಬಂಧಿಸಿದ್ದಾರೆ.
ಕೇಸ್ ನಂ 7: ರಾಮ ಮೂರ್ತಿನಗರದ ಹಲ್ಲೆ ಪ್ರಕರಣದ ಆರೋಪಿ ಮುನಿಯಪ್ಪ 2012 ರಿಂದ ತಲೆಮರೆಸಿಕೊಂಡಿದ್ದು ಇದೀಗ ಪೊಲೀಸರು ಬಂಧಿಸಿದ್ದಾರೆ.
ಕೇಸ್ ನಂ 8: ಹೆಣ್ಣೂರಿನ ಡಕಾಯಿತಿ ಪ್ರಕರಣದ ಆರೋಪಿ ಫಜಿವುಲ್ಲಾ ಎಂಬ ಆರೋಪಿಯನ್ನು ಪೊಲೀಸರು ಬಂಧಸಿದ್ದಾರೆ. ಸುಮಾರು ಏಳು ವರ್ಷಗಳಿಂದ ನಾಪತ್ತೆಯಾಗಿದ್ದನು.
ಕೇಸ್ ನಂ 9: ರಾಜಗೋಪಾಲ ನಗರ ಕೊಲೆ ಬೆದರಿಕೆ ಪ್ರಕರಣದ ಆರೋಪಿ ಕುಮಾರ್ನನ್ನು ಪೊಲೀಸರು ಬಂಧಿಸಿದ್ದಾರೆ. 2007 ರಿಂದಲೂ ಆರೋಪಿ ತಲೆಮರೆಸಿಕೊಂಡಿದ್ದನು.
ಕೇಸ್ ನಂ 10: 2010 ರಿಂದ ತಲೆಮರೆಸಿಕೊಂಡಿದ್ದ ಮನೆಗಳ್ಳತನ ಪ್ರಕರಣದ ಆರೋಪಿ ಜಾನ್ನನ್ನು ಮಲ್ಲೇಶ್ವರಂ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪೊಲೀಸರು ಒಟ್ಟು 20 ಹಳೆಯ ಪ್ರಕರಣಗಳನ್ನ ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಿದ್ದಾರೆ. ಪತ್ತೆ ಹಚ್ಚಿದ ಪ್ರಕರಣಗಳ ಮೇಲೂ ಪೊಲೀಸ್ ಕಮಿಷನರ್ ಬಿ.ದಯಾನಂದ್ ಕಣ್ಣಿಟ್ಟಿದ್ದಾರೆ. ಇಷ್ಟು ದಿನ ಯಾಕೆ ಬಂಧನ ಮಾಡಿಲ್ಲ ಎಂಬುದರ ಬಗ್ಗೆ ಪೂರ್ವಾಪರ ಪರಿಶೀಲನೆ ನಡೆಸಿದ್ದಾರೆ.