ಮನೆ ಅಪರಾಧ ಬೆಂಗಳೂರು:  ಕೆಟ್ಟಿದ್ದ ಹಾಲು ಹಿಂತಿರುಗಿಸಲು ಯತ್ನಿಸಿ 77 ಸಾವಿರ ಕಳೆದುಕೊಂಡ ವೃದ್ಧೆ

ಬೆಂಗಳೂರು:  ಕೆಟ್ಟಿದ್ದ ಹಾಲು ಹಿಂತಿರುಗಿಸಲು ಯತ್ನಿಸಿ 77 ಸಾವಿರ ಕಳೆದುಕೊಂಡ ವೃದ್ಧೆ

0

ಬೆಂಗಳೂರು:  ಆನ್‌ ಲೈನ್‌ ನಲ್ಲಿ ಖರೀದಿಸಿದ ಹಾಲು ಕೆಟ್ಟಿದ್ದರಿಂದ ವಾಪಸ್‌ ಕೊಡಲು ಯತ್ನಿಸಿದ ವೃದ್ಧೆಯೊಬ್ಬರಿಗೆ ಸೈಬರ್‌ ವಂಚಕರು 77 ಸಾವಿರ ರೂ. ವಂಚಿಸಿದ್ದಾರೆ.

ಮೈಸೂರು ರಸ್ತೆಯ ಕಸ್ತೂರ ಬಾ ನಗರದ 65 ವರ್ಷದ ವೃದ್ಧೆ ವಂಚನೆಗೊಳಗಾದವರು. ನೊಂದ ವೃದ್ಧೆ ನೀಡಿದ ದೂರಿನ ಮೇರೆಗೆ ಬ್ಯಾಟರಾಯನಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಇ-ಕಾಮರ್ಸ್‌ ಜಾಲತಾಣದ ಮೂಲಕ ದಿನಸಿ ವಸ್ತುಗಳನ್ನು ತರಿಸುತ್ತಿದ್ದರು. ಅದೇ ರೀತಿ ಮಾ.18ರಂದು ಹಾಲು ಖರೀದಿಸಿದ್ದಾರೆ. ಮನೆಗೆ ಬಂದಾಗ ಹಾಲು ಹಾಳಾಗಿತ್ತು. ಹೀಗಾಗಿ ಅದನ್ನು ವಾಪಸ್‌ ಮಾಡಲು ಸಂಬಂಧಪಟ್ಟ ಆ್ಯಪ್‌ ಸಹಾಯವಾಣಿಗೆ ಕರೆ ಮಾಡಲು ಗೂಗಲ್‌ ನಲ್ಲಿ ದೂರವಾಣಿ ಸಂಖ್ಯೆ ಶೋಧಿಸಿದ್ದಾರೆ. ಅದರಲ್ಲಿ ಸಿಕ್ಕ ದೂರವಾಣಿ ಸಂಖ್ಯೆಗೆ ವೃದ್ಧೆ ಕರೆ ಮಾಡಿ ದೂರು ನೀಡಿದ್ದಾರೆ.

ಕರೆ ಸ್ವೀಕರಿಸಿದ ಅಪರಿಚಿತ ವ್ಯಕ್ತಿ, ಹಾಲು ಮಾರಾಟ ಕಂಪನಿಯ ಪ್ರತಿನಿಧಿ ಎಂದು ಪರಿಚಯಿಸಿಕೊಂಡಿದ್ದಾನೆ. ಅಲ್ಲದೆ, ಹಾಳಾದ ಹಾಲನ್ನು ಹಿಂದಿರುಗಿಸಬೇಕಾಗಿಲ್ಲ. ಅದರ ಬದಲಿಗೆ ನಿಮ್ಮ ಬ್ಯಾಂಕ್‌ ಖಾತೆಗೆ ಹಣ ಜಮೆ ಮಾಡುತ್ತೇವೆ. ನಿಮ್ಮ ವಾಟ್ಸ್‌ಆ್ಯಪ್‌ಗೆ ಲಿಂಕ್‌ ಕಳುಹಿಸುತ್ತೇವೆ. ಅದರಲ್ಲಿ ನಿಮ್ಮ ಯುಪಿಐ ಐಡಿ ವಿವರ ನಮೂದು ಮಾಡಿದರೆ ಸಾಕು ನಿಮ್ಮ ಹಣ ವಾಪಸ್‌ ಬರಲಿದೆ ಎಂದು ನಂಬಿಸಿದ್ದಾರೆ. ಅದರಂತೆ ವೃದ್ಧೆ, ತನ್ನ ವಾಟ್ಸ್‌ ಆ್ಯಪ್‌ ಗೆ ಬಂದ ಲಿಂಕ್‌ ತೆರೆದು ಯುಪಿಐ ಐಡಿ ನಂಬರ್‌ ನನ್ನು ನಮೂದು ಮಾಡಿದ್ದಾರೆ. ತಕ್ಷಣ ವೃದ್ಧೆಯ ಬ್ಯಾಂಕ್‌ ಖಾತೆಯಿಂದ ಹಂತವಾಗಿ 77 ಸಾವಿರ ರೂ. ಕಡಿತವಾಗಿದೆ.

ಈ ಸಂಬಂಧ ವೃದ್ಧೆ ದೂರು ನೀಡಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದರು.