ಬೆಂಗಳೂರು: “ವ್ಯಾಪಾರದಲ್ಲಿ ಪ್ರಾದೇಶಿಕ ಭಾವನೆಗಿಂತ ಸ್ಪರ್ಧಾತ್ಮಕತೆಯೇ ಮುಖ್ಯ” ಎಂಬ ನಿಲುವುಗಳನ್ನು ಪ್ರಕಟಿಸುತ್ತ, ಕೆಎಸ್‌ಡಿಎಲ್ (ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ) ಸಂಸ್ಥೆಯ ಪ್ರಚಾರಕ್ಕಾಗಿ ಬಾಲಿವುಡ್ ನಟಿ ತಮನ್ನಾ ಭಾಟಿಯಾ ಅವರನ್ನು ರಾಯಭಾರಿಯಾಗಿ ನೇಮಿಸಿರುವ ಕುರಿತು ಉದ್ದೇಶಿತ ವಿವಾದಗಳಿಗೆ ಸ್ಪಷ್ಟನೆ ನೀಡಿದ್ದಾರೆ ಸಚಿವ ಎಂ.ಬಿ. ಪಾಟೀಲ್.
“ನಾನು ವಚನ ಪರಂಪರೆಯಿಂದ ಬಂದವನು. ಕನ್ನಡ ಮತ್ತು ಕರ್ನಾಟಕದ ಮೇಲಿನ ಬದ್ಧತೆ ನನ್ನಲ್ಲಿ ಯಾರಿಗಿಂತಲೂ ಕಡಿಮೆ ಇಲ್ಲ. ನಮ್ಮ ರಾಜ್ಯದ ಕಲಾವಿದರನ್ನೂ ನಾನು ಗೌರವಿಸುತ್ತೇನೆ” ಎಂದರು ಪಾಟೀಲ್. ಇದು ಬಿಸಿನೆಸ್, ಸ್ಪರ್ಧೆ ಜಾಸ್ತಿ. ಕನ್ನಡದ ಅಸ್ಮಿತೆ, ಕನ್ನಡದ ಕಲಾವಿದರ ಬಗ್ಗೆ ಬದ್ಧತೆ, ಗೌರವ ಇದೆ. ಯಾರೂ ವಿವಾದ ಮಾಡಬಾರದು. ನಮ್ಮದು ಪ್ಯಾನ್ ಇಂಡಿಯಾ ಬಿಸಿನೆಸ್, ಈಗ ವಿದೇಶಕ್ಕೂ ಬಿಸಿನೆಸ್ ಒಯ್ಯಬೇಕೆಂಬ ಯೋಜನೆ ಇದೆ ಎಂದು ವಿವರಿಸಿದರು.
ತಮನ್ನಾ ಭಾಟಿಯಾ ಅವರ ನೇಮಕಕ್ಕೆ ಕೆಲವರು ಕನ್ನಡದ ಹೆಸರು ಹೇಳಿಕೊಂಡು ತಕರಾರು ತೆಗೆದಿರುವ ಹಿನ್ನೆಲೆಯಲ್ಲಿ ಇಂದು ಈ ಕುರಿತಾಗಿ ಮಾಧ್ಯಮದರೊಂದಿಗೆ ಮಾತನಾಡಿದ ಅವರು, ಕನ್ನಡಿಗರನ್ನೇ ನಾವು ಮೊದಲು ಸಂಪರ್ಕಿಸಿದ್ದೇವೆ. ಆದ್ರೆ ಅವ್ರು ಯಾರೂ ಫ್ರೀ ಇರಲಿಲ್ಲ ಎಂದು ತಿಳಿಸಿದರು. ಇನ್ನು ಯಾರೇ ರಾಯಭಾರಿ ಆದರೂ 2 ವರ್ಷ ಲಾಕ್ ಆಗ್ತಾರೆ. ಇದರಲ್ಲಿ ಕನ್ನಡಕ್ಕೆ ಅವಮಾನ ಮಾಡಬೇಕು ಎಂಬ ಉದ್ದೇಶ ಇಲ್ಲ ಎಂದು ಸ್ಪಷ್ಟಪಡಿಸಿದರು.
ನಾನು ಈ ಖಾತೆಯನ್ನು ವಹಿಸಿಕೊಂಡ ಮೇಲೆ ಕೆಎಸ್ಡಿಎಲ್ನಲ್ಲಿ ಉತ್ಪಾದನೆ ಶೇಕಡ 40ರಷ್ಟು ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ನಾವೇನೂ ಹೊಸ ಯಂತ್ರೋಪಕರಣಗಳನ್ನು ಖರೀದಿಸಿಲ್ಲ. ಜತೆಗೆ ಎಫ್ ಎಂಸಿಜಿ ವಲಯದಲ್ಲಿ ಸಂಸ್ಥೆಯ ಬೆಳವಣಿಗೆ ಶೇಕಡ 15ರಷ್ಟಿದೆ. ಈ ವಿಚಾರದಲ್ಲಿ ಗೋದ್ರೇಜ್ (ಶೇ.11), ಹಿಂದೂಸ್ತಾನ್ ಲಿವರ್ಸ್ (ಶೇ 9), ಐಟಿಸಿ (ಶೇಕಡ 8), ವಿಪ್ರೋ (ಶೇಕಡ 7) ಮುಂತಾದ ಉದ್ದಿಮೆಗಳನ್ನೂ ಕೆಎಸ್‌ಡಿಎಲ್ ಹಿಂದಿಕ್ಕಿದೆ.
ಮೈಸೂರು ಸ್ಯಾಂಡಲ್ ಸಂಸ್ಥೆಯಿಂದ ಹೊಸ ಸೋಪ್‌ಗಳನ್ನು ಸಹ ಪರಿಚಯ ಮಾಡಿದ್ದೇವೆ. ನಾವು ಈಗ ಪರ್‌ಫ್ಯೂಮ್ ಮಾರ್ಕೆಟ್‌ಗೂ ಕಾಲಿಡ್ತಿದ್ದೇವೆ. ಇದನ್ನು 5 ಸಾವಿರ ಕೋಟಿ ರೂ. ಬಿಸಿನೆಸ್‌ಗೆ ತೆಗೆದುಕೊಂಡು ಹೋಗುವ ಯೋಜನೆ ಇದೆ. ಮುಂದೆ ವಿದೇಶಿಯವರನ್ನೂ ರಾಯಭಾರಿಯಾಗಿ ಆಯ್ಕೆ ಮಾಡುವ ಉದ್ದೇಶ ಇದೆ. ಆ ಕಾಲ ಬರಲಿ ಅಂತ ಹಾರೈಸಿ. ನಾವು ಅಖಿಲ ಭಾರತ ಮಟ್ಟವನ್ನು ಮೀರಿ ಜಾಗತಿಕ ಮಟ್ಟದಲ್ಲಿ ಯೋಚಿಸಬೇಕಾಗಿದೆ. ಕೆಎಸ್‌ಡಿಎಲ್ ಅನ್ನು ಕೇವಲ ಭಾರತವಲ್ಲ, ಅಂತಾರಾಷ್ಟ್ರೀಯ ಬ್ರ್ಯಾಂಡ್ ಆಗಿಸಬೇಕೆನ್ನುವುದು ನಮ್ಮ ಹೆಗ್ಗುರಿ ಎಂದರು.














