ಬೆಂಗಳೂರು : ಬೆಂಗಳೂರು ನಗರದ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿರುವ ವಿಚಿತ್ರ ಪ್ರಕರಣವೊಂದರಲ್ಲಿ, ಮನೆ ಕಳ್ಳತನ ಮಾಡಿ ಅದರ ಹಣದಿಂದ 20ಕ್ಕೂ ಹೆಚ್ಚು ಮಕ್ಕಳ ಶಾಲಾ ಮತ್ತು ಕಾಲೇಜು ಶುಲ್ಕ ಪಾವತಿಸಿದ ಕಳ್ಳನನ್ನು ಬಂಧಿಸಲಾಗಿದೆ.
ಬೇಗೂರು ನಿವಾಸಿ ಶಿವು ಈ ಕಳ್ಳತನದ ಪ್ರಮುಖ ರೂವಾರಿ. ಹೆಂಡತಿ, ಮಕ್ಕಳಿಲ್ಲದ ಶಿವು ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸುತ್ತಿದ್ದಾಗ ಏರಿಯಾದಲ್ಲಿ ಸ್ನೇಹಿತರು ಮಕ್ಕಳ ಸ್ಕೂಲ್ ಫೀಸ್ ಕಟ್ಟಲು ಪರದಾಡುತ್ತಿರುವುದನ್ನು ನೋಡಿದ್ದ. ಬಳಿಕ ಶಿವು ಬ್ಯಾಡರಹಳ್ಳಿ ಸೇರಿದಂತೆ ಹಲವೆಡೆ ಮನೆಗಳಿಗೆ ಕನ್ನ ಹಾಕಿದ್ದು, ಕದ್ದ ಚಿನ್ನಾಭರಣವನ್ನು ಸ್ನೇಹಿತರಾದ ಅನಿಲ್ ಮತ್ತು ವಿವೇಕ್‌ನ ಸಹಾಯದಿಂದ ಮಾರಾಟ ಮಾಡಿದ್ದಾನೆ.
ತಮಿಳುನಾಡಿನಲ್ಲಿ 22 ಲಕ್ಷಕ್ಕೆ ಚಿನ್ನ ಮಾರಾಟ ಮಾಡಿಸಿದ್ದ ಶಿವು ಬಂದ ಹಣದಲ್ಲಿ ವಿವೇಕ್‌ಗೆ 4 ಲಕ್ಷ, ಅನಿಲ್‌ಗೆ 4 ಲಕ್ಷ ರೂ. ಮೌಲ್ಯದ ಆಟೋ ಕೊಡಿಸಿದ್ದ. ಉಳಿದ 14 ಲಕ್ಷ ರೂ. ಹಣದಲ್ಲಿ ಏರಿಯಾದ 20 ಮಕ್ಕಳಿಗೆ ಶಾಲಾ ಹಾಗೂ ಕಾಲೇಜ್ ಫೀಸ್ ಕಟ್ಟಿದ್ದಾನೆ. ಮನೆಗಳ್ಳರ ಬೆನ್ನತ್ತಿದ್ದ ಬ್ಯಾಡರಹಳ್ಳಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಶಿವು, ಅನಿಲ್ ಹಾಗು ವಿವೇಕ್‌ನನ್ನು ಬಂಧಿಸಿದ ಪೊಲೀಸರು 24 ಲಕ್ಷ ಮೌಲ್ಯದ 260 ಗ್ರಾಂ ಚಿನ್ನದ ಗಟ್ಟಿಯನ್ನು ಸೀಜ್ ಮಾಡಿದ್ದಾರೆ.














