ಬೆಂಗಳೂರು: ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಮತ್ತೆ ಸರಕಾರದ ಒಳಜಗಳ ಬೆಳಕಿಗೆ ಬಂದಿದೆ. ಈ ಬಾರಿ ಭಿನ್ನಾಭಿಪ್ರಾಯ ಬೆಳೆಯುತ್ತಿರುವ ಕ್ಷೇತ್ರ ಜಲಸಂಪನ್ಮೂಲ ಇಲಾಖೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವೆ ಅಧಿಕಾರಿಗಳ ವರ್ಗಾವಣೆ ವಿಚಾರವಾಗಿ ತೀವ್ರ ಅಸಮಾಧಾನ ಮೂಡಿರುವುದು ಇದೀಗ ಬಹಿರಂಗವಾಗಿದೆ. ಡಿಕೆ ಶಿವಕುಮಾರ್ ಅವರು ಮುಖ್ಯ ಕಾರ್ಯದರ್ಶಿಗೆ ಕಠಿಣ ಶೈಲಿಯ ಪತ್ರ ಬರೆದು, ತಮ್ಮ ಇಲಾಖೆಯ ವೈಯಕ್ತಿಕ ನಿರ್ಧಾರಗಳಲ್ಲಿನ ಅತಿಕ್ರಮಣಕ್ಕೆ ಕಿಡಿಕಾರಿದ್ದಾರೆ.
ಜಲಸಂಪನ್ಮೂಲ ಇಲಾಖೆಯ ಐವರು ಹಿರಿಯ ಎಂಜಿನಿಯರ್ಗಳನ್ನು ಮೇ 9ರಂದು ಡಿಪಿಎಆರ್ ವತಿಯಿಂದ ಲೋಕೋಪಯೋಗಿ ಇಲಾಖೆಗೆ ವರ್ಗಾಯಿಸಿ ಅಧಿಸೂಚನೆ ಹೊರಡಿಸಲಾಗಿತ್ತು. ಈ ಕುರಿತು ಡಿಕೆಶಿ ಅವರು ಯಾವುದೇ ಸೂಚನೆ ನೀಡಿಲ್ಲ ಅಥವಾ ಈ ನಿರ್ಧಾರದಲ್ಲಿ ಪಾಲ್ಗೊಂಡಿಲ್ಲ ಎಂಬ ಕಾರಣದಿಂದ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರ ಹೊರತಾಗಿಯೂ ಅಧಿಕಾರಿಗಳನ್ನು ನೇರವಾಗಿ ವರ್ಗಾಯಿಸಲಾಗಿದೆ ಎಂಬುದು ಡಿಕೆಶಿ ಅವರ ಆಕ್ಷೇಪ.
ಮೇ 13 ರಂದು ಮುಖ್ಯ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ, ಡಿಕೆಶಿ ಅವರು ಈ ವರ್ಗಾವಣೆಗಳನ್ನು ತಕ್ಷಣವೇ ಹಿಂಪಡೆಯುವಂತೆ ಆಗ್ರಹಿಸಿದ್ದಾರೆ. ತನ್ನ ಇಲಾಖೆ ಬಗ್ಗೆ ಅಂತಿಮ ನಿರ್ಧಾರವನ್ನು ತಾನು ತೆಗೆದುಕೊಳ್ಳಬೇಕಾದ ಸಂದರ್ಭದಲ್ಲೂ ಮುಖ್ಯಮಂತ್ರಿಯವರ ವತಿಯಿಂದ ಯಾವುದೇ ಪೂರ್ವ ಸೂಚನೆಯಿಲ್ಲದೆ ಈ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಆಡಳಿತಾತ್ಮಕ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ವರ್ಗಾವಣೆ ಮಾಡಲಾಗಿದೆ. ಸ್ಥಳ ನಿಯುಕ್ತಿಗೊಳಿಸಿದ ಹುದ್ದೆಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡು, ಪ್ರಭಾರ ವರ್ಗಾವಣೆ ಪ್ರಮಾಣ ಪತ್ರವನ್ನು (ಸಿಟಿಸಿ) ಸಲ್ಲಿಸಬೇಕು ಎಂದೂ ಡಿಪಿಎಆರ್ ನಿರ್ದೇಶನ ನೀಡಿತ್ತು. ಅದರ ಅನ್ವಯ ಎಲ್ಲಾ ಐವರು ಎಂಜಿನಿಯರ್ಗಳು ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದರು.
ವರ್ಗಾವಣೆಗೊಂಡ ಅಧಿಕಾರಿಗಳ ಪಟ್ಟಿ:
- ಎಚ್.ಸಿ. ರಮೇಂದ್ರ – ಅಂತರರಾಜ್ಯ ಜಲ ವಿವಾದ, ಬೆಂಗಳೂರು
- ವಿನಾಯಕ ಜಿ. ಸುಗೂರ – ನೀರಾವರಿ ಯೋಜನೆಗಳ ವಲಯ, ಕೆಎನ್ಎನ್, ತುಮಕೂರು
- ಜೆ.ಇ. ಯತೀಶ್ ಚಂದ್ರನ್ – ಎತ್ತಿನಹೊಳೆ ಯೋಜನೆ, ತುಮಕೂರು
- ಶಿವಾನಂದ ಆರ್. ನಾಯಕ್ – ಕಾಡಾ ನೀರಾವರಿ ಯೋಜನೆ, ಕಲಬುರಗಿ
- ಪಿ.ಬಿ. ಪ್ರಕಾಶ್ – ಪೊಲೀಸ್ ವಸತಿ ಅಭಿವೃದ್ಧಿ ನಿಗಮ, ಬೆಂಗಳೂರು














