ಮನೆ ರಾಜ್ಯ ಬೆಂಗಳೂರು : ಮಾಜಿ ಸಭಾಪತಿ ಡೇವಿಡ್ ಸಿಮಿಯೋನ್ ನಿಧನ

ಬೆಂಗಳೂರು : ಮಾಜಿ ಸಭಾಪತಿ ಡೇವಿಡ್ ಸಿಮಿಯೋನ್ ನಿಧನ

0

ಬೆಂಗಳೂರು : ವಿಧಾನ ಪರಿಷತ್ತಿನ ಮಾಜಿ ಸಭಾಪತಿ ಹಾಗೂ ಹಿರಿಯ ರಾಜಕೀಯ ಮುತ್ಸದ್ದಿ ಡೇವಿಡ್ ಸಿಮಿಯೋನ್ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ.

ಕಲಬುರಗಿ ಮೂಲದ ಡೇವಿಡ್ ಸಿಮಿಯೋನ್ ಅವರಿಗೆ 75 ವರ್ಷ ವಯಸ್ಸಾಗಿತ್ತು. ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರ ಸೇರಿದಂತೆ ಅಪಾರ ಸಂಖ್ಯೆಯ ಬಂಧು ಬಳಗವನ್ನು ಅಗಲಿದ್ದಾರೆ.

ಹಿರಿಯ ರಾಜಕಾರಣಿ ಡೇವಿಡ್ ಸಿಮಿಯೋನ್ 1996ರಿಂದ 2002ರವರೆಗೆ ಮೂರು ವರ್ಷಗಳ ಕಾಲ ಪರಿಷತ್ತಿನ ಉಪಸಭಾಪತಿಯಾಗಿ ಹಾಗೂ ಸುಮಾರು ಒಂದೂವರೆ ವರ್ಷಗಳ ಕಾಲ ಹಂಗಾಮಿ ಸಭಾಪತಿಯಾಗಿ ಸದನವನ್ನು ಸಮರ್ಥವಾಗಿ ನಿರ್ವಹಿಸಿದ್ದರು.

ಉತ್ತರ ಕರ್ನಾಟಕ ಅದರಲ್ಲೂ ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ, ಸಾಂಸ್ಕೃತಿಕ, ಸಾಮಾಜಿಕ ಸೇರಿದಂತೆ ಎಲ್ಲ ರಂಗಗಳ ಅಭಿವೃದ್ದಿಗೆ ಶ್ರಮಿಸಿರುವ ಸಿಮಿಯೋನ್ ಅವರು, ತಮ್ಮ ಸರಳತೆಯಿಂದಲೇ ಇಂದಿನ ಯುವ ರಾಜಕಾರಣಿಗಳಿಗೆ ಮಾದರಿಯಾಗಿದ್ದರು.

ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು, ಇಂದು ಮಧ್ಯಾಹ್ನ ಇಲ್ಲಿನ ಮಣಿಪಾಲ್ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆಂದು ಗೊತ್ತಾಗಿದೆ. ನಾಳೆ(ಜೂ.11) ಕಲಬುರಗಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.