ಮನೆ ಅಪರಾಧ ಬೆಂಗಳೂರು : ಸೂಟ್‌ಕೇಸ್‌ನಲ್ಲಿ ಬಾಲಕಿ ಶವ ಪತ್ತೆ ಪ್ರಕರಣ : ಬಿಹಾರದಲ್ಲಿ 7 ಆರೋಪಿಗಳ ಬಂಧನ

ಬೆಂಗಳೂರು : ಸೂಟ್‌ಕೇಸ್‌ನಲ್ಲಿ ಬಾಲಕಿ ಶವ ಪತ್ತೆ ಪ್ರಕರಣ : ಬಿಹಾರದಲ್ಲಿ 7 ಆರೋಪಿಗಳ ಬಂಧನ

0

ಬೆಂಗಳೂರು: ಚಂದಾಪುರ ರೈಲ್ವೆ ಬ್ರಿಡ್ಜ್ ಬಳಿ ಮೇ 21ರಂದು ಪತ್ತೆಯಾದ 17 ವರ್ಷದ ಬಾಲಕಿಯ ಶವ ಹತ್ಯೆಯ ಪ್ರಕರಣದಲ್ಲ್ಲಿ ತಿರುವು ಕಂಡಿದ್ದು, ಬಿಹಾರದಲ್ಲಿ ಈ ಸಂಬಂಧ ಏಳು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

ಬಂಧಿತ ಆರೋಪಿಗಳೆಲ್ಲರೂ ಬಿಹಾರದ ನವಾಡ ಜಿಲ್ಲೆಗೆ ಸೇರಿದವರಾಗಿದ್ದು, ಬೆಂಗಳೂರು ಗ್ರಾಮಾಂತರ ಸೂರ್ಯನಗರ ಪೊಲೀಸರು ಬಿಹಾರಕ್ಕೆ ತೆರಳಿ ಅವರನ್ನು ಬಂಧಿಸಿ ಕರ್ನಾಟಕಕ್ಕೆ ಕರೆತರುತ್ತಿದ್ದಾರೆ. ಈ ಏಳು ಮಂದಿಯಲ್ಲಿ ಮೂವರನ್ನು ಈಗಾಗಲೇ ಗುರುತಿಸಲಾಗಿದ್ದು, ಆಶಿಕ್ ಕುಮಾರ್, ಮುಖೇಶ್ ಮತ್ತು ರಾಜಾರಾಮ್ ಮೋಹನ್ ಎಂದು ಗುರುತಿಸಲಾಗಿದೆ. ಬಂಧಿತ ಆಶಿಕ್ ಕುಮಾರ್ ಈಗಾಗಲೇ ವಿವಾಹಿತನಾಗಿದ್ದು, ಅವನಿಗೆ ಇಬ್ಬರು ಮಕ್ಕಳು ಇದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೇ 21 ರಂದು ಚಂದಾಪುರ ರೈಲ್ವೆ ಬ್ರಿಡ್ಜ್ ಬಳಿ ಸುಮಾರು 17 ವರ್ಷದ ಬಾಲಕಿಯ ಶವವಿರುವ ಸೂಟ್‌ಕೇಸ್‌ ಪತ್ತೆಯಾಗಿ ಸಂಚಲನ ಉಂಟುಮಾಡಿತ್ತು. ಶವದ ಪಕ್ಕದಲ್ಲಿ ಯಾವುದೇ ಗುರುತಿನ ಚೀಟಿ ಅಥವಾ ವೈಯಕ್ತಿಕ ವಸ್ತುಗಳು ಪತ್ತೆಯಾಗದ ಕಾರಣದಿಂದಾಗಿ ಬಾಲಕಿಯ ಗುರುತು ಪತ್ತೆ ಹಚ್ಚುವುದು ಕಷ್ಟಕರವಾಗಿತ್ತು.

ಆದರೆ, ನಂತರದ ತನಿಖೆಯಲ್ಲಿ ಮೃತ ಬಾಲಕಿಯನ್ನು ‘ರೀಮಾ’ ಎಂದು ಗುರುತಿಸಲಾಯಿತು. ಪ್ರಾಥಮಿಕ ತನಿಖೆಯ ಪ್ರಕಾರ, ಬಾಲಕಿಯನ್ನು ಬೇರೆಡೆ ಕೊಲೆಮಾಡಿ ನಂತರ ಶವವನ್ನು ರೈಲ್ವೆ ಬ್ರಿಡ್ಜ್ ಬಳಿ ಹಾಕಲಾಗಿತ್ತೆಂದು ತಿಳಿದುಬಂದಿದೆ. ಶವವನ್ನು ಎಸೆದ ಕ್ರಮ ಮತ್ತು ಸ್ಥಳೀಯ ಚಲನೆಗಳನ್ನು ಆಧರಿಸಿ ಪೊಲೀಸರು ಹತ್ಯೆಯು ಯೋಜಿತವಾಗಿರುವ ಸಾಧ್ಯತೆ ಇದೆ ಎಂದು ಶಂಕಿಸಿದ್ದಾರೆ.

ಈ ಹತ್ಯೆಯ ಹಿಂದೆ ನಿಖರ ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಪೊಲೀಸರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ ಬಳಿಕ ಹೆಚ್ಚಿನ ಮಾಹಿತಿ ಬಹಿರಂಗವಾಗುವ ಸಾಧ್ಯತೆಯಿದೆ. ಆರೋಪಿಗಳು ಬಾಲಕಿಯೊಂದಿಗೆ ಯಾವ ಸಂಬಂಧ ಹೊಂದಿದ್ದರು, ಏಕೆ ಹತ್ಯೆ ಮಾಡಲಾಯಿತು, ಯಾವ ರೀತಿಯಲ್ಲಿ ಕೊಲೆ ನಡೆಸಲಾಯಿತು ಎಂಬ ಪ್ರಶ್ನೆಗಳಿಗೆ ಉತ್ತರಗಳು ನಿರೀಕ್ಷೆಯಲ್ಲಿವೆ.