ಬೆಂಗಳೂರು: ನಗರದ ಇಸ್ಕಾನ್ ದೇವಾಲಯದ ಆಸ್ತಿ ಒಡೆತನದ ವಿವಾದಕ್ಕೆ ಕೊನೆಗೂ ತಾರ್ಕಿಕ ಅಂತ್ಯ ಸಿಕ್ಕಿದೆ. ಬೆಂಗಳೂರಿನ ಹರೇ ಕೃಷ್ಣ ಮಂದಿರ ಮತ್ತು ಶೈಕ್ಷಣಿಕ ಸಂಕೀರ್ಣದ ನಿಯಂತ್ರಣದ ಹೋರಾಟದಲ್ಲಿ ಸುಪ್ರೀಂ ಕೋರ್ಟ್ ಇಸ್ಕಾನ್ ದೇಗುಲದ ಪರವಾಗಿ ತೀರ್ಪು ನೀಡಿದೆ.
ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್. ಓಕಾ ಮತ್ತು ಆಗಸ್ಟೀನ್ ಜಾರ್ಜ್ ಮಸಿಹ್ ಅವರನ್ನೊಳಗೊಂಡ ಪೀಠವು ಬೆಂಗಳೂರು ಇಸ್ಕಾನ್ ಸೊಸೈಟಿ ಪರ ತೀರ್ಪು ನೀಡಿದೆ.
ಮುಂಬೈ ಇಸ್ಕಾನ್ ಸಂಸ್ಥೆಯು ಬೆಂಗಳೂರಿನ ಇಸ್ಕಾನ್ ದೇವಾಲಯ ತನ್ನ ಶಾಖೆಯ ಭಾಗವೆಂದು ಹೇಳಿಕೊಂಡಿತ್ತು. ಈ ಸಂಬಂಧ ಮೊದಲು ಸಿಟಿ ಸಿವಿಲ್ ಕೋರ್ಟ್ ಮೆಟ್ಟಿಲೇರಿತ್ತು. ಬೆಂಗಳೂರು ಇಸ್ಕಾನ್ ಸಂಸ್ಥೆಯ ಎಲ್ಲ ಆಸ್ತಿ ತನಗೆ ಸೇರಬೇಕು ಎಂದು ವಾದಿಸಿತ್ತು. ಆದ್ರೆ ಬೆಂಗಳೂರು ಇಸ್ಕಾನ್ ಸಂಸ್ಥೆಯು ಇದು ಸ್ವತಂತ್ರ ಸಂಸ್ಥೆ ಅಂತ ವಾದಿಸುತಲೇ ಬಂದಿತ್ತು. ಈ ಸಂಬಂಧ 2009ರಲ್ಲಿ ಸಿಟಿ ಸಿವಿಲ್ ಕೋರ್ಟ್ ಬೆಂಗಳೂರು ಇಸ್ಕಾನ್ ಸಂಸ್ಥೆ ಪರ ತೀರ್ಪು ನೀಡಿತ್ತು. 2009ರಲ್ಲಿ ಸಿಟಿ ಸಿವಿಲ್ ಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ ಕರ್ನಾಟಕ ಹೈಕೋರ್ಟ್ನಲ್ಲಿ ಮುಂಬೈ ಸಂಸ್ಥೆ ಮೇಲ್ಮನವಿ ಸಲ್ಲಿಸಿತ್ತು.
ಕರ್ನಾಟಕ ಹೈಕೋರ್ಟ್ನ ಅಂದು ನ್ಯಾ. ನಾಗಮೋಹನ್ ದಾಸ್ ಮತ್ತು ಅರಳಿ ನಾಗರಾಜ್ ಅವರಿದ್ದ ದ್ವಿಸದಸ್ಯ ಪೀಠ ವಾದವನ್ನು ಒಪ್ಪಿಕೊಂಡು, ಬೆಂಗಳೂರು ಇಸ್ಕಾನ್ನ ಆಸ್ತಿಗಳ ಮೇಲೆ ಮುಂಬೈ ಇಸ್ಕಾನ್ಗೆ ಹಕ್ಕಿದೆ ಎಂದು ತೀರ್ಪು ನೀಡಿತ್ತು. ಬೆಂಗಳೂರು ಇಸ್ಕಾನ್ ಕಾನೂನಾತ್ಮಕವಾಗಿ ಸ್ವತಂತ್ರ ಸಂಸ್ಥೆಯಾಗಿ ಅಸ್ತಿತ್ವದಲ್ಲಿಲ್ಲ, ಬದಲಿಗೆ ಇದು ಮುಂಬೈ ಇಸ್ಕಾನ್ನ ಶಾಖೆಯಾಗಿದೆ ಎಂದು ಹೇಳಿತ್ತು.
2002ರ ವರೆಗೆ ಬೆಂಗಳೂರು ಇಸ್ಕಾನ್ ಆದಾಯ ತೆರಿಗೆ ವಿವರಗಳನ್ನು ಸಲ್ಲಿಸಿರಲಿಲ್ಲ. ಬಳಿಕ ಸುಮಾರು 35.59 ಕೋಟಿ ರೂ. ಆದಾಯ ತೆರಿಗೆ ಸಲ್ಲಿಸಿದ್ದ ವಿವರವನ್ನ ತೋರಿಸಿ ಕೋರ್ಟ್ ಗಮನ ಸೆಳೆದಿತ್ತು. ಆದಾಗ್ಯೂ ಬೆಂಗಳೂರು ಇಸ್ಕಾನ್ ರಾಜಾಜಿನಗರದ ಆಸ್ತಿಗಳ (ಸರ್ವೇ ನಂ. 174 ಮತ್ತು 175) ಮಾಲೀಕತ್ವವನ್ನು ಸಾಬೀತುಪಡಿಸಲು ವಿಫಲವಾಗಿತ್ತು.
ನಂತರ ಹೈಕೋರ್ಟ್ ಆದೇಶ ಪ್ರಶ್ನಿಸಿ ಬೆಂಗಳೂರು ಇಸ್ಕಾನ್ ಸಂಸ್ಥೆಯು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಸುದೀರ್ಘ ವಿಚಾರಣೆ ಬಳಿಕ ಇದೀಗ ಹೈಕೋರ್ಟ್ ಆದೇಶ ರದ್ದು ಮಾಡಿ ಈ ಹಿಂದೆ ಸಿಟಿ ಸಿವಿಲ್ ಕೋರ್ಟ್ ನೀಡಿದ ಆದೇಶವನ್ನೇ ಎತ್ತಿ ಹಿಡಿದಿದೆ. ಹೀಗಾಗಿ ಬೆಂಗಳೂರು ಇಸ್ಕಾನ್ ಸ್ವತಂತ್ರ ಸಂಸ್ಥೆಯಾಗಿ ಘೋಷಣೆಯಾಗಿದ್ದು, ಆಸ್ತಿ ಒಡೆತನ, ಹಾಗೂ ಆಡಳಿತ ತನ್ನಲ್ಲಿ ಉಳಿಸಿಕೊಂಡಿದೆ.
ಇದು 26 ವರ್ಷಗಳ ಹೋರಾಟಕ್ಕೆ ಜಯ ಸಿಕ್ಕಿದೆ ಅಂತ ಇಸ್ಕಾನ್ ಬೆಂಗಳೂರಿನ ಉಪಾಧ್ಯಕ್ಷರಾದ ಚಂಚಲಪತಿ ದಾಸ್ ಸಂಸತ ವ್ಯಕ್ತಪಡಿಸಿದ್ದಾರೆ. ಜಯ ಸಿಕ್ಕ ಸಂಭ್ರಮದಲ್ಲಿ ಬೆಂಗಳೂರಿನ ಇಸ್ಕಾನ್ ದೇವಸ್ಥಾನದಲ್ಲಿ ಭಕ್ತರು ಸಿಬ್ಬಂದಿ ಕುಣಿದು, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ.















