ಬೆಂಗಳೂರು: ನಗರದಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ, ಸುಮಾರು ₹30 ಲಕ್ಷ ಮೌಲ್ಯದ ಗಾಂಜಾ ಜಪ್ತಿ ಮಾಡಿದ್ದು, ಓರ್ವ ಯುವತಿ ಸೇರಿದಂತೆ ಒಡಿಶಾ ಮೂಲದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಘಟನೆ ಬೆಂಗಳೂರಿನ ರಾಜಾಜಿನಗರದ ಮೆಟ್ರೋ ಸ್ಟೇಷನ್ ಬಳಿ ನಡೆದಿದೆ. ಗಾಂಜಾ ಮಾರಾಟ ಜಾಲವನ್ನು ನಿಯಂತ್ರಿಸುವ ಉದ್ದೇಶದಿಂದ ಅಬಕಾರಿ ಇಲಾಖೆ ನಡೆಸಿದ ಖಚಿತ ಮಾಹಿತಿ ಆಧಾರಿತ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ದಾಳಿಯ ಮೂಲಕ ಬಂಧಿಸಲಾಗಿದೆ. ಈ ಘಟನೆಯು ನಗರದಲ್ಲಿ ಗಾಂಜಾ ವ್ಯಾಪಾರದ ತೀವ್ರತೆಯನ್ನೂ, ಹೊರ ರಾಜ್ಯಗಳಿಂದ ನಿಷೇಧಿತ ಮಾದಕ ವಸ್ತುಗಳು ನಗರಕ್ಕೆ ಸಾಗುತ್ತಿರುವ ಕುರಿತು ಆತಂಕದ ಸಂಗತಿಯಾಗಿಯೂ ಪರಿಗಣಿಸಲಾಗಿದೆ.
ಬಂಧಿತ ಆರೋಪಿಗಳು ಒಡಿಶಾ ಮೂಲದವರಾಗಿದ್ದು, ಇವರ ಹೆಸರುಗಳು ಸಂಪತ್ ಪ್ರಧಾನ (23), ತಪಸ್ ಪ್ರಧಾನ್ (22), ಜಗನ್ ಪತಂಜಲಿ (24) ಹಾಗೂ ದೀಪಾಂಜಲಿ (22) ಎಂದು ಗುರುತಿಸಲಾಗಿದೆ. ಆರೋಪಿಗಳು ರಾಜಾಜಿನಗರದ ಮೆಟ್ರೋ ಸ್ಟೇಷನ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದಾಗ ಅವರನ್ನು ಬಂಧಿಸಲಾಗಿದೆ.
ಈ ಬಗ್ಗೆ ಎನ್ಡಿಪಿಎಸ್, 1985 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಬಂಧಿತರಿಂದ ತನಿಖೆ ಮುಂದುವರಿಸಲಾಗುತ್ತಿದೆ.














