ಬೆಂಗಳೂರು: ಕೆಲ ಕಿಡಿಗೇಡಿಗಳು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯನ್ನೇ ಮಾರಾಟ ಮಾಡಲು ಮುಂದಾಗಿದ್ದಾರೆ.
ಕೆಲ ದಿನಗಳ ಹಿಂದೆ ಎಸ್ಪಿ ಕಚೇರಿ ಆವರಣಕ್ಕೆ ಅತಿಕ್ರಮ ಪ್ರವೇಶ ಮಾಡಿ ಅಕ್ರಮವಾಗಿ ವಿಡಿಯೋ ಸೆರೆ ಹಿಡಿಯುವಾಗ ಪ್ರಶ್ನೆ ಮಾಡಿದ ಪೊಲೀಸ್ ಅಧಿಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಆರು ಮಂದಿ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು ಜಿಲ್ಲೆ ನಿಸ್ತಂತು ಜಿಲ್ಲಾ ನಿಯಂತ್ರಣ ಕೊಠಡಿ ಇನ್‌ಸ್ಪೆಕ್ಟರ್ ಹಾಗೂ ಎಸ್ಟೇಟ್ ಅಧಿಕಾರಿ ಸಂತೋಷ್ ಗೌಡ ನೀಡಿದ ದೂರಿನ ಮೇರೆಗೆ ವಿದ್ಯಾರಣ್ಯಪುರದ ಎಂ.ಡಿ.ಹನೀಫ್, ವಿಜಯನಗರದ ರಾಜಶೇಖರ್, ಉಲ್ಲಾಳದ ಮೊಹಮ್ಮದ್ ನದೀಮ್, ಸಂಜಯನಗರದ ಮೋಹನ್ ಶೆಟ್ಟಿ, ಗಣಪತಿ ಹಾಗೂ ಜಹೀರ್ ಅಹಮದ್ ಎಂಬುವರ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ. ಈ ಸಂಬಂಧ ಸದ್ಯ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ದೂರಿನಲ್ಲಿ ಏನಿದೆ?: ಜೂ.3ರಂದು ಮಧ್ಯಾಹ್ನ 1 ಗಂಟೆಗೆ ಕೆಲ ಅಪರಿಚಿತರು ವಸಂತನಗರದ ಮಿಲ್ಲರ್ಸ್ ರಸ್ತೆಯ ಕೇಂದ್ರ ವಲಯ ಐಜಿಪಿ ಕಚೇರಿ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಸ್ಪಿ ಕಚೇರಿ ಆವರಣವನ್ನು ಅತಿಕ್ರಮ ಪ್ರವೇಶಿಸಿದ್ದಾರೆ. ತಮ್ಮ ಮೊಬೈಲ್‌ನಿಂದ ಕಚೇರಿಯ ಕಟ್ಟಡ ಹಾಗೂ ಆವರಣವನ್ನು ಚಿತ್ರೀಕರಿಸಿ, ಫೋಟೋ ಸೆರೆ ಹಿಡಿಯಲು ಮುಂದಾಗಿದ್ದಾರೆ.
ಅದನ್ನು ಗಮನಿಸಿದ ಎಸ್ಟೇಟ್ ಆಫೀಸರ್ ಸಂತೋಷ್ ಗೌಡ, ಏಕೆ ಕಚೇರಿಯ ಕಟ್ಟಡ ಚಿತ್ರೀಕರಿಸುತ್ತಿರುವಿರಿ’ ಎಂದು ಪ್ರಶ್ನಿಸಿದ್ದಾರೆ. ಆಗ ಅಪರಿಚಿತರು, “ನಮ್ಮನ್ನು ಕೇಳಲು ನೀನು ಯಾರು’ ಎಂದು ಪ್ರಶ್ನಿಸಿದ್ದಾರೆ. ಆಗ ಸಂತೋಷ್ ಗೌಡ, “ನಾನು ಈ ಕಚೇರಿ ಕಟ್ಟಡ ಮತ್ತು ಆವರಣಕ್ಕೆ ಎಸ್ಟೇಟ್ ಅಧಿಕಾರಿಯಾಗಿರುವುದರಿಂದ ಪ್ರಶ್ನೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ನಿಂದೇನು ಎಂದು ಮರು ಪ್ರಶ್ನೆ ಹಾಕಿದ ಅಪರಿಚಿತರು, ಈ ಸ್ವತ್ತಿನ ದಾಖಲೆಗಳು ನಮ್ಮ ಬಳಿ ಇವೆ. ನಾವು ಚಿತ್ರೀಕರಣ ಮಾಡುತ್ತೇವೆ ಎಂದಿದ್ದಾರೆ.
ಸಂತೋಷ್ ಗೌಡ ಎಚ್ಚರಿಕೆ ನೀಡಿದರೂ, ಅಪರಿಚಿತರು ಚಿತ್ರೀಕರಣಕ್ಕೆ ಮುಂದಾಗಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಬಳಿಕ ಅಪರಿಚಿತರನ್ನು ಸಂತೋಷ್ ಗೌಡ ಕಚೇರಿಯೊಳಗೆ ಕರೆದೊಯ್ದು ಚಿತ್ರೀಕರಣದ ಬಗ್ಗೆ ಪ್ರಶ್ನೆ ಮಾಡಿದಾಗ, ಈ ಸ್ವತ್ತಿನ ಮಾಲೀಕರಾದ ಗಣಪತಿ ಮತ್ತು ಜಹೀರ್ ಎಂಬವವರು ನಮಗೆ ಜಿಪಿಎ ಮಾಡಿಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಆರೋಪಿಗಳು ಈ ಸ್ವತ್ತನ್ನು ಅಕ್ರಮವಾಗಿ ಮಾರಾಟ ಮಾಡುವ ದುರುದ್ದೇಶದಿಂದ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಚೇರಿ ಆವರಣ ಅತಿಕ್ರಮ ಪ್ರವೇಶ ಮಾಡಿ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಅಲ್ಲದೆ, ತಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಸಂತೋಷ್ ಗೌಡ ಆರೋಪಿಸಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.