ಮನೆ ಕಾನೂನು ಬೆಂಗಳೂರು-ಮೈಸೂರು ಇನ್ಫ್ರಾ ಪ್ರೊಜೆಕ್ಟ್​​​: ಪರಿಹಾರ ನೀಡದೇ ಭೂಮಿ ವಶಪಡಿಸಿಕೊಳ್ಳುವಂತಿಲ್ಲ- ಸುಪ್ರೀಂಕೋರ್ಟ್​

ಬೆಂಗಳೂರು-ಮೈಸೂರು ಇನ್ಫ್ರಾ ಪ್ರೊಜೆಕ್ಟ್​​​: ಪರಿಹಾರ ನೀಡದೇ ಭೂಮಿ ವಶಪಡಿಸಿಕೊಳ್ಳುವಂತಿಲ್ಲ- ಸುಪ್ರೀಂಕೋರ್ಟ್​

0

ನವದೆಹಲಿ: ಕಲ್ಯಾಣ ರಾಜ್ಯದಲ್ಲಿ ಅಭಿವೃದ್ಧಿಗಾಗಿ ವಶಪಡಿಸಿಕೊಳ್ಳುವ ಭೂಮಿಗೆ ಸೂಕ್ತ ಪರಿಹಾರ ನೀಡದೆ, ವ್ಯಕ್ತಿಯೊಬ್ಬನ ಆಸ್ತಿಯನ್ನು ಯಾರೂ ವಶಪಡಿಸಿಕೊಳ್ಳುವಂತಿಲ್ಲ’ ಎಂದು ಸುಪ್ರೀಂಕೋರ್ಟ್​ ಗುರುವಾರ ಹೇಳಿದೆ.

Join Our Whatsapp Group

ಬೆಂಗಳೂರು ಮತ್ತು ಮೈಸೂರು ನೈಸ್​ ಕಾರಿಡಾರ್​ಗೆ ಸಂಬಂಧಿಸಿದಂತೆ ಅಭಿವೃದ್ಧಿ ಕಾಮಗಾರಿಗಳಿಗೆ ವಶಪಡಿಸಿಕೊಂಡ ಭೂಮಿಗೆ ಕಳೆದ 22 ವರ್ಷಗಳಿಂದ ಸೂಕ್ತ ಪರಿಹಾರ ನೀಡಿಲ್ಲ ಎಂದು ಸಂತ್ರಸ್ತರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಕೆ.ವಿ. ವಿಶ್ವನಾಥನ್ ಅವರ ಪೀಠವು ಈ ತೀರ್ಪು ನೀಡಿದೆ.

ಭೂಮಾಲೀಕರಾದ ಬರ್ನಾರ್ಡ್​ ಫ್ರಾನ್ಸಿಸ್​ ಜೋಸೆಫ್​ ವಾಜ್​ ಮತ್ತು ಇತರರಿಗೆ 22 ವರ್ಷ ಅಲೆದಾಡುವಂತೆ ಮಾಡಿದ ಅಧಿಕಾರಿಗಳ ಉದಾಸೀನತೆ ಮತ್ತು ಗಾಢ ನಿದ್ರೆ ಬಗ್ಗೆ ಸುಪ್ರೀಂಕೋರ್ಟ್​ ಕಿಡಿಕಾರಿದ್ದು, ಕಾನೂನಿನ ಪ್ರಕಾರ ಸೂಕ್ತ ಪರಿಹಾರ ನೀಡದೇ ಯಾವುದೇ ವ್ಯಕ್ತಿಯ ಆಸ್ತಿಯನ್ನು ಕಸಿದುಕೊಳ್ಳುವಂತಿಲ್ಲ ಎಂದಿದೆ.

ಆಸ್ತಿಯು ಮೂಲಭೂತ ಹಕ್ಕು ಅಲ್ಲದಿದ್ದರೂ, ಸಂವಿಧಾನದ ವಿಧಿ 300-ಎ ಅಡಿಯಲ್ಲಿ ಆಸ್ತಿ ಹೊಂದುವ ಅವಕಾಶವಿದೆ. ಇದರ ಪ್ರಕಾರ, ಯಾವುದೇ ವ್ಯಕ್ತಿ ತನ್ನ ಆಸ್ತಿಯಿಂದ ವಂಚಿತರಾಗದಂತೆ ನೋಡಿಕೊಳ್ಳುತ್ತದೆ. ಇದು ಸಾಂವಿಧಾನಿಕ ಹಕ್ಕಾಗಿದೆ. ಹೀಗಾಗಿ ಒಬ್ಬ ವ್ಯಕ್ತಿಗೆ ಸೂಕ್ತ ಪರಿಹಾರವನ್ನು ನೀಡದೇ ಆತನ ಆಸ್ತಿಯನ್ನು ಪಡೆಯಲು ಸಾಧ್ಯವಿಲ್ಲ ಎಂದು ಪೀಠವು ತನ್ನ 57 ಪುಟಗಳ ತೀರ್ಪಿನಲ್ಲಿ ಹೇಳಿದೆ.

ಪ್ರಕರಣದಲ್ಲಿ, ಅರ್ಜಿದಾರರಿಗೆ ಪರಿಹಾರವನ್ನು ನೀಡದಿರಲು ಯಾವುದೇ ಕಾರಣಗಳಿಲ್ಲ. ಆದರೆ ರಾಜ್ಯ/ಕೆಐಎಡಿಬಿ ಅಧಿಕಾರಿಗಳ ನಿರಾಸಕ್ತಿ ಧೋರಣೆಯು ಭೂಮಿ ಕಳೆದುಕೊಂಡವರಿಗೆ ಅನ್ಯಾಯ ಮಾಡಿದಂತಾಗಿದೆ ಎಂದಿದೆ.

ಎರಡು ತಿಂಗಳಲ್ಲಿ ಪರಿಹಾರ ರೂಪಿಸಿ: ಬೆಂಗಳೂರು-ಮೈಸೂರು ಸಂಪರ್ಕಿಸುವ ಮೂಲಸೌಕರ್ಯ ಕಾರಿಡಾರ್ ಯೋಜನೆಗಾಗಿ ಸ್ವಾಧೀನಪಡಿಸಿಕೊಂಡ ಭೂಮಿ ಕುರಿತಂತೆ ಎರಡು ತಿಂಗಳ ಅವಧಿಯೊಳಗೆ ಹೊಸ ತೀರ್ಪು ನೀಡುವಂತೆ ವಿಶೇಷ ಭೂಸ್ವಾಧೀನ ಅಧಿಕಾರಿಗೆ ಸುಪ್ರೀಂ ಕೋರ್ಟ್ ಇದೇ ವೇಳೆ ಸೂಚಿಸಿದೆ.

2019 ರ ಏಪ್ರಿಲ್​ 22ಕ್ಕೆ ಅನ್ವಯವಾಗುವಂತೆ ವಿವಾದಿತ ಭೂಮಿಯ ಮಾರುಕಟ್ಟೆ ಮೌಲ್ಯ ನಿರ್ಧರಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು. ಎರಡು ತಿಂಗಳಲ್ಲಿ ಪರಿಹಾರ ಮೊತ್ತವನ್ನು ಪಾವತಿ ಮಾಡುವಂತೆಯೂ ಹೇಳಿದೆ. ಜೊತೆಗೆ, ಕರ್ನಾಟಕ ಹೈಕೋರ್ಟ್​ ವಿಭಾಗೀಯ ಪೀಠವು 2022 ರ ನವೆಂಬರ್​​ 22 ರಂದು ನೀಡಿದ್ದ ತೀರ್ಪನ್ನು ರದ್ದುಗೊಳಿಸಿತು.