ಬೆಂಗಳೂರು: ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಯ ನಡುವೆಯೇ ಉದ್ಯೋಗಸ್ಥರ ಮೇಲೆ ಇರುವ ಕೆಲಸದ ಒತ್ತಡ ಜೀವನವನ್ನೇ ಬಲಿ ತೆಗೆದುಕೊಳ್ಳುತ್ತಿರುವ ದುಃಖದ ಸುದ್ದಿ ಮತ್ತೆ ರಾಜ್ಯದ ರಾಜಧಾನಿ ಬೆಂಗಳೂರು ನಡೆದಿದೆ. ಈ ಬಾರಿ ಬಲಿಯಾದವರು ಐಐಎಸ್ಸಿ ಪದವೀಧರ ಮತ್ತು ಓಲಾ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯುವ ಟೆಕ್ಕಿ ನಿಖಿಲ್ ಸೋಮವಂಶಿ.
ಅತಿಯಾದ ಕೆಲಸದ ಒತ್ತಡಕ್ಕೆ ತಡೆಯಲಾಗದೆ, ನಿಖಿಲ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ನಿಖಿಲ್ ಅವರು ಆಗಸ್ಟ್ 2024ರಲ್ಲಿ ಓಲಾದ ಎ1 ಘಟಕದಲ್ಲಿ ಮೆಷಿನ್ ಲರ್ನಿಂಗ್ ಎಂಜಿನಿಯರ್ ಆಗಿ ಕೆಲಸಕ್ಕೆ ಸೇರಿದ್ದರು. ವಾರ್ಷಿಕ ರೂ. 9.30 ಲಕ್ಷ ವೇತನ ಹೊಂದಿದ್ದ ಅವರು ತಮ್ಮ ಜ್ಞಾನ ಮತ್ತು ನಿಪುಣತೆಯಿಂದ ಕೆಲಸ ನಿರ್ವಹಿಸುತ್ತಿದ್ದರು. ಆದರೆ, ಆಂತರಿಕ ಕಚೇರಿ ವ್ಯವಸ್ಥೆಯಲ್ಲಿನ ಅನ್ಯಾಯ ಮತ್ತು ನಿರಂತರ ಒತ್ತಡ, ಅಂತಿಮವಾಗಿ ದಾರುಣ ಘಟನೆಗೆ ಕಾರಣವಾಗಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಅಮೆರಿಕದಲ್ಲಿರುವ ಮ್ಯಾನೇಜರ್ ರಾಜ್ಕಿರಣ್ ಪನುಗಂಟಿ ಎಂಬುವವರು ನಿರಂತರ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಇದರಿಂದ ಹಲವು ಕೆಲಸಗಾರರು ಕೆಲಸ ಬಿಟ್ಟಿದ್ದರು. ನಂತರ ಕೆಲಸ ಬಿಟ್ಟ ನೌಕರರ ಕೆಲಸವನ್ನೂ ನಿಖಿಲ್ ಒಬ್ಬರೇ ನಿರ್ವಹಿಸುತ್ತಿದ್ದರು ಇದರಿಂದ ಕೆಲಸದ ಒತ್ತಡ ತಡೆಯಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.















