ಮನೆ ರಾಜಕೀಯ ಬಿಜೆಪಿ ವಿರೋಧದ ಮಧ್ಯೆ ಬೆಂಗಳೂರು ಅರಮನೆ ಮೈದಾನ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರ

ಬಿಜೆಪಿ ವಿರೋಧದ ಮಧ್ಯೆ ಬೆಂಗಳೂರು ಅರಮನೆ ಮೈದಾನ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರ

0

ಬೆಂಗಳೂರು: ಬೆಂಗಳೂರು ಅರಮನೆ (ಭೂ ಬಳಕೆ ಮತ್ತು ನಿಯಂತ್ರಣ) ವಿಧೇಯಕ-2025 ವಿಪಕ್ಷ ಬಿಜೆಪಿ ಸದಸ್ಯರ ತೀವ್ರ ವಿರೋಧದ ಮಧ್ಯೆ ಗುರುವಾರ ವಿಧಾನಸಭೆಯಲ್ಲಿ ಅಂಗೀಕಾರಗೊಂಡಿತು.

Join Our Whatsapp Group

ಇದಕ್ಕೂ ಮುಂಚೆ ಬೆಂಗಳೂರು ಅರಮನೆಯ ಭೂ ಬಳಕೆ, ನಿಯಂತ್ರಣ ಕುರಿತಾದ ವಿಧೇಯಕದ ಅಗತ್ಯತೆ ಬಗ್ಗೆ ಕಾನೂನು ಸಚಿವ ಹೆಚ್​.ಕೆ.ಪಾಟೀಲ್​​​​​ ವಿವರಿಸಿದರು.

“ರಸ್ತೆ ವಿಸ್ತರಣೆಯ ಉದ್ದೇಶಕ್ಕಾಗಿ ಬಳಕೆಯಾಗುವ ಅರಮನೆ ಮೈದಾನದ 15 ಎಕರೆ 36 ಗುಂಟೆ ಭೂಮಿಗೆ ಪರಿಹಾರವಾಗಿ ಟಿಡಿಆರ್​ (ಅಭಿವೃದ್ಧಿ ಹಕ್ಕು ವರ್ಗಾವಣೆ) 3,014 ಕೋಟಿ ರೂ. ನೀಡಬೇಕು ಎಂದು ಸುಪ್ರೀಂ ಕೋರ್ಟ್‌ ಆದೇಶ ನೀಡಿತ್ತು. ಸಣ್ಣ ಜಾಗಕ್ಕೆ ಭಾರಿ ಮೊತ್ತವನ್ನು ಪಾವತಿಸಬೇಕಾದ ಹೊರೆಯಿಂದ ತಪ್ಪಿಸಿಕೊಳ್ಳಲು ಸರ್ಕಾರ ಈ ವಿಧೇಯಕ ತರಲಾಗಿದೆ” ಎಂದು ತಿಳಿಸಿದರು.

“ವಿಧೇಯಕದಂತೆ ಅಗತ್ಯವಿರುವಷ್ಟು ಜಾಗವನ್ನು ಬಳಸಿಕೊಳ್ಳಲು ಮತ್ತು ಉದ್ದೇಶಿತ ಪ್ರಸ್ತಾವನೆಯನ್ನು ಕೈಬಿಡಲು ಸರ್ಕಾರಕ್ಕೆ ಅಧಿಕಾರ ದೊರೆಯುತ್ತದೆ. ಯಾವುದೇ ನ್ಯಾಯಾಲಯದ ತೀರ್ಪು ಅಥವಾ ಸರ್ಕಾರವು ಈ ಹಿಂದೆ ಕೈಗೊಂಡ ತೀರ್ಮಾನದಂತೆ ಯಾವುದೇ ಮೂಲಸೌಕರ್ಯ ಯೋಜನೆಯಿಂದ ಭಾಗಶಃ ಅಥವಾ ಸಂಪೂರ್ಣವಾಗಿ ಹಿಂದೆ ಸರಿಯಬಹುದಾಗಿದೆ” ಎಂದು ವಿವರಿಸಿದರು.‌

ಬೆಂಗಳೂರು ಅರಮನೆ ವಿಧೇಯಕಕ್ಕೆ ಅರವಿಂದ ಬೆಲ್ಲದ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. “ಬೆಂಗಳೂರು ಅರಮನೆ ಮೈಸೂರು ಮಹಾರಾಜರ ಮನೆತನಕ್ಕೆ ಸೇರಿದ್ದು. ಬ್ರಿಟಿಷರಿಗೇ ಮಾದರಿಯಾಗಿ ಆಡಳಿತ ಮಾಡಿದವರು ಮೈಸೂರು ಮಹಾರಾಜರು. ನಮ್ಮಲ್ಲೂ ಅಂಥ ಆಡಳಿತ ಬರಬೇಕು ಅಂತ ಬಯಸಿದ್ದರು. ಉತ್ತರ ಕರ್ನಾಟಕದ ನಮ್ಮ ಕಡೆಯವರು, ನಾವೂ ಅದರ ಭಾಗವಾಗಬೇಕು ಅಂತ ಬಯಸಿದ್ದರು. ಮಹಾರಾಜರ ವಂಶದ ತಂಟೆಗೆ ಹೋದರೆ ನಿಮಗೆ ಆ‌ ಚಾಮುಂಡೇಶ್ವರಿ ಶಾಪ ಹಾಕ್ತಾಳೆ, ಜನ ಶಾಪ ಹಾಕ್ತಾರೆ. ಟಿಡಿಆರ್ ಕೊಡೋದ್ರಿಂದ ಸರ್ಕಾರಕ್ಕೆ‌ ಆರ್ಥಿಕ ನಷ್ಟ ಆಗಲ್ಲ. ಟಿಡಿಆರ್ ಅಂದ್ರೆ ಅಭಿವೃದ್ಧಿ ಹಕ್ಕುಗಳ ವರ್ಗಾವಣೆ. ಹಣ ಕೊಡೋದಲ್ಲ ಹಕ್ಕುಗಳ ವರ್ಗಾವಣೆ ಅಷ್ಟೇ” ಎಂದರು.

ಮುಂದುವರೆದು, “ಸರ್ಕಾರ ಮಹಾರಾಜರ ಕುಟುಂಬದ ಜತೆಗೆ ವೈಷಮ್ಯದ ರಾಜಕಾರಣ ಮಾಡುತ್ತಿದೆ” ಅಂತ ಆರೋಪಿಸಿದರು.‌ ಇದಕ್ಕೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ವಿಧೇಯಕ ಮತ್ತು ಟಿಡಿಆರ್ ಮೌಲ್ಯ ಕೊಡದ ಸರ್ಕಾರದ ನಡೆಗೆ ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಪರಸ್ಪರ ಮಾತಿನ ಚಕಮಕಿ, ಕೋಲಾಹಲ ಉಂಟಾಯಿತು. ಬೆಂಗಳೂರು ಅರಮನೆ ವಿಧೇಯಕಕ್ಕೆ ಆಡಳಿತ-ವಿಪಕ್ಷ ನಡುವೆ ಸಹಮತ ಬಾರದ ಹಿನ್ನೆಲೆ, ವಿಧೇಯಕವನ್ನು ಮತಕ್ಕೆ ಹಾಕಲಾಯಿತು. ಧ್ವನಿಮತದೊಂದಿಗೆ ಬೆಂಗಳೂರು ಅರಮನೆ ವಿಧೇಯಕ ಅಂಗೀಕಾರಗೊಂಡಿತು.