ಮನೆ ರಾಜ್ಯ ಮಂಡ್ಯ ಬಾಲಕಿ ಸಾವಿನ ಬಳಿಕ ಎಚ್ಚೆತ್ತ ಬೆಂಗಳೂರು ಪೊಲೀಸರು : ಹೊಸ ಎಸ್‌ಒಪಿ ಜಾರಿ

ಮಂಡ್ಯ ಬಾಲಕಿ ಸಾವಿನ ಬಳಿಕ ಎಚ್ಚೆತ್ತ ಬೆಂಗಳೂರು ಪೊಲೀಸರು : ಹೊಸ ಎಸ್‌ಒಪಿ ಜಾರಿ

0

ಬೆಂಗಳೂರು: ಮಂಡ್ಯದಲ್ಲಿ ವಾಹನ ತಡೆಯುವ ಸಂದರ್ಭದಲ್ಲಿ ಸಂಭವಿಸಿದ ಎಡವಟ್ಟಿನಿಂದ ಬಾಲಕಿ ಸಾವನ್ನಪ್ಪಿದ್ದ ದುರ್ಘಟನೆ ಬಳಿಕ ಬೆಂಗಳೂರು ನಗರ ಪೊಲೀಸರು ಎಚ್ಚೆತ್ತಿದ್ದು, ಇದೀಗ ಹೊಸ ಸ್ಟಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್‌ಒಪಿ) ಜಾರಿಗೊಳಿಸಿದ್ದಾರೆ.

ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಅವರು ಬೆಂಗಳೂರು ನಗರದ ಎಲ್ಲಾ ಹಿರಿಯ ಅಧಿಕಾರಿಗಳು ಮತ್ತು ಇನ್ಸ್‌ಪೆಕ್ಟರ್‌ಗಳಿಗೆ ಹೊಸ ಮಾರ್ಗಸೂಚಿ (ಎಸ್‌ಒಪಿ) ಯನ್ನು ನೀಡಿದ್ದಾರೆ. ರಾತ್ರಿ ಪಾಳಿಯಲ್ಲಿ ವಾಹನ ತಪಾಸಣೆ ವೇಳೆ ಯಾವುದೇ ಅಪಘಾತ ಸಂಭವಿಸದಂತೆ ಈ ಕ್ರಮಗಳನ್ನು ಅನುಸರಿಸಲು ಸೂಚನೆ ನೀಡಲಾಗಿದೆ.

ಹೊಸ ಎಸ್‌ಒಪಿ ಮುಖ್ಯ ಅಂಶಗಳು:

  1. ರಿಫ್ಲೆಕ್ಸ್ ಜಾಕೆಟ್ ಕಡ್ಡಾಯ – ಎಲ್ಲಾ ಸಿಬ್ಬಂದಿಗಳು ರಾತ್ರಿಯಲ್ಲಿಯೂ ಸ್ಪಷ್ಟವಾಗಿ ಕಾಣಿಸಿಕೊಳ್ಳಲು.
  2. ರಿಫ್ಲೆಕ್ಸ್ ಲೈಟ್ಸ್ ಬಳಕೆ – ನಾಕಾಬಂದಿ ಬ್ಯಾರಿಕೇಡ್‌ಗಳ ಮೇಲೆ ಬೆಳಕಿನ ವ್ಯವಸ್ಥೆ ಅಗತ್ಯ.
  3. ಜಿಗ್-ಜಾಗ್ ಬ್ಯಾರಿಕೇಡ್ – ವಾಹನಗಳು ವೇಗವಾಗಿ ನುಗ್ಗದಂತೆ ಕ್ರಮ.
  4. ಸೌಮ್ಯ ವರ್ತನೆ – ಸಾರ್ವಜನಿಕರ ಜೊತೆ ಮೃದು ಮಾತಿನಲ್ಲಿ ವರ್ತಿಸಬೇಕು.
  5. ಮಕ್ಕಳೊಂದಿಗೆ ಪ್ರಯಾಣಿಸುವವರ ಗಮನ – ಮಕ್ಕಳಿರುವ ವಾಹನಗಳನ್ನು ಬದಿಗೆ ನಿಲ್ಲಿಸಿ ಸೂಕ್ತವಾಗಿ ಪರಿಶೀಲನೆ ನಡೆಸಬೇಕು.
  6. ಅವಘಡಕ್ಕೆ ಹೊಣೆ – ಯಾವುದೇ ಅನಾಹುತ ಸಂಭವಿಸಿದರೆ ಸ್ಥಳದಲ್ಲಿರುವ ಸಿಬ್ಬಂದಿ ಮತ್ತು ಅಧಿಕಾರಿ ನೇರ ಹೊಣೆಗಾರರಾಗಿರುತ್ತಾರೆ.

ಮಂಡ್ಯದಲ್ಲಿ ಇತ್ತೀಚೆಗೆ ನಡೆದ ನಾಕಾಬಂದಿ ವೇಳೆ ತಪ್ಪಾದ ತಪಾಸಣೆ ಕ್ರಮದಿಂದ ಬಾಲಕಿ ಮೃತಪಟ್ಟಿದ್ದು, ಇದರಿಂದಾಗಿ ಸಾರ್ವಜನಿಕರ ಆಕ್ರೋಶ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಈ ಎಸ್‌ಒಪಿ ತುರ್ತಾಗಿ ಜಾರಿಗೆ ತರಲಾಗಿದೆ.