ಬೆಂಗಳೂರು : ತೀವ್ರ ಮಳೆಯಿಂದಾಗಿ ನಗರದಲ್ಲಿ ಉಂಟಾದ ಅನಾಹುತಗಳನ್ನು ಪರಿಶೀಲಿಸಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು ಬೆಂಗಳೂರು ಸಿಟಿ ರೌಂಡ್ಸ್ ನಡೆಸುತ್ತಿದ್ದರಾದರೂ, ಹವಾಮಾನ ಪರಿಸ್ಥಿತಿ ಕೈ ಮೀರಿ ಹೋಗಿದ್ದರಿಂದ ಅವರ ತಾತ್ಕಾಲಿಕ ಪರಿಶೀಲನೆ ಅರ್ಧಕ್ಕೆ ಮೊಟಕುಗೊಂಡಿದೆ.
ಬೆಂಗಳೂರಿನಲ್ಲಿ ನಿರಂತರ ಮಳೆಯ ಪರಿಣಾಮ ರಾಜಕಾಲುವೆಗಳ ಒತ್ತುವರಿ, ನೀರು ನಿಂತಿರುವ ಪ್ರದೇಶಗಳು, ಮತ್ತು ಸಾರಿಗೆ ವ್ಯವಸ್ಥೆಯ ಅಸ್ತವ್ಯಸ್ತತೆಗೆ ಕಾರಣವಾಗಿರುವ ಸಮಸ್ಯೆಗಳನ್ನು ಸಮೀಕ್ಷಿಸಲು ಇಂದು ಬೆಳಿಗ್ಗೆಯಿಂದಲೇ ಸಿಎಂ ಮತ್ತು ಡಿಸಿಎಂ ಸ್ಥಳ ವೀಕ್ಷಣೆಯಲ್ಲಿ ತೊಡಗಿದ್ದರು. ಈ ಸಂದರ್ಭದಲ್ಲಿ ಅವರು ಹಲವಾರು ತೀವ್ರವಾಗಿ ಬಾಧಿತ ಪ್ರದೇಶಗಳಿಗೆ ಭೇಟಿ ನೀಡಿ ಸಂಬಂಧಿತ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಸಿಎಂ ಸಿದ್ಧರಾಮಯ್ಯ ಅವರು ಮೊದಲಿಗೆ ಯಲಹಂಕ ಪ್ರದೇಶದ ರಾಜಕಾಲುವೆ ಒತ್ತುವರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಧಿಕಾರಿಗಳು ಮಾನ್ಯತಾ ಟೆಕ್, ಇಬ್ಸು, ಮ್ಯಾನ್ ಫೋ ಮತ್ತು ಕಾರ್ಲೆ ಖಾಸಗಿ ಬಿಲ್ಡರ್‌ಗಳು ಕಾಲುವೆ ಪ್ರದೇಶವನ್ನು ಅಕ್ರಮವಾಗಿ ಬಳಕೆ ಮಾಡಿಕೊಂಡಿರುವುದಾಗಿ ಮಾಹಿತಿ ನೀಡಿದರು. ಈ ವೇಳೆ ಸಿಎಂ ಗರಂ ಆಗಿದ್ದು, “ನೋಟಿಸ್ ಕೊಡದೇ ಏಕೆ ಕುಳಿತಿದ್ದೀರಿ? ಯಾವುದೇ ಬಿಲ್ಡರ್‌ನಿಗೂ ಮುಲಾಜು ಬೇಡ. ರಾಜಕಾಲುವೆ ತೆರವುಗೊಳಿಸಿ” ಎಂದು ಗಂಭೀರವಾಗಿ ಸೂಚನೆ ನೀಡಿದರು.
ಹೆಚ್‌ಬಿಆರ್ ಲೇಔಟ್‌ನಲ್ಲಿ ತುಂಬಿ ಹರಿಯುತ್ತಿರುವ ರಾಜಕಾಲುವೆ ಪರಿಸ್ಥಿತಿಯನ್ನು ನೋಡಿದ ನಂತರ, ಅವರು ಬಾಟಲ್ ನೆಕ್ ಸಮಸ್ಯೆ ಮತ್ತು ಅದರಿಂದ ಉಂಟಾಗುತ್ತಿರುವ ನೀರಿನ ಹರಿವಿನ ಅಡಚಣೆ ಬಗ್ಗೆ ಮಾಹಿತಿ ಪಡೆದುಕೊಂಡರು. ಗೆದ್ದಲಹಳ್ಳಿಯ ಕಾಲುವೆ 29 ಮೀಟರ್‌ನಿಂದ 8 ಮೀಟರ್‌ಗೆ ಇಳಿದಿರುವ ಭಾಗದಲ್ಲಿ ನೀರು ಹರಿಯಲು ಅಡಚಣೆ ಉಂಟಾಗಿದ್ದು, ಇದು ಸಾಯಿ ಲೇಔಟ್ ನಂತಹ ಪ್ರದೇಶಗಳಲ್ಲಿ ಪ್ರವಾಹ ಉಂಟುಮಾಡುತ್ತಿದೆ. ಈ ಸಮಸ್ಯೆಗೆ ತಕ್ಷಣವೇ ಪರಿಹಾರ ನೀಡುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅದಷ್ಟೇ ಅಲ್ಲದೆ, ಸಾಯಿ ಲೇಔಟ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರಿಂದ ಆಪತ್ತಿನ ಸಂದರ್ಭದಲ್ಲಿ ಎದುರಾದ ಸಮಸ್ಯೆಗಳ ಬಗ್ಗೆ ತಾವು ನೇರವಾಗಿ ಮಾಹಿತಿ ಪಡೆದ ಸಿಎಂ, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ತಕ್ಷಣಕ್ಕೆ ಕೈಗೊಳ್ಳಬಹುದಾದ ಪರಿಹಾರ ಕ್ರಮಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸುವಂತೆ ಸಂಬಂಧಿತ ಇಲಾಖೆಗೆ ಸೂಚನೆ ನೀಡಿದರು.
ಈ ಬಳಿಕ ನಗರದಲ್ಲಿ ಮಳೆ ಹೆಚ್ಚಾದ ಕಾರಣದಿಂದಾಗಿ ಸಿಎಂ, ಡಿಸಿಎಂ ಬೆಂಗಳೂರು ಸಿಟಿ ರೌಂಡ್ಸ್ ಅರ್ಧಕ್ಕೆ ಮೊಟಕುಗೊಳಿಸಿದರು.














