ಮನೆ Uncategorized ಬೆಂಗಳೂರು: ತಡವಾಗಿ ಬೆಳಕಿಗೆ ಬಂದ ಅತ್ಯಾಚಾರ ಪ್ರಕರಣ : ಮೂವರು ಶಂಕಿತರು ವಶದಲ್ಲಿ

ಬೆಂಗಳೂರು: ತಡವಾಗಿ ಬೆಳಕಿಗೆ ಬಂದ ಅತ್ಯಾಚಾರ ಪ್ರಕರಣ : ಮೂವರು ಶಂಕಿತರು ವಶದಲ್ಲಿ

0

ಬೆಂಗಳೂರು : ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡನಾಗಮಂಗಲ ಸಾಯಿ ಲೇಔಟ್‌ನಲ್ಲಿ ಮೂರು ದಿನಗಳ ಹಿಂದೆ ನಡೆದ ಅತ್ಯಾಚಾರ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ. ಸ್ನೇಹಿತನ ಮನೆಗೆ ಹೋಗಿದ್ದ ಯುವತಿಯೊಬ್ಬರ ಮೇಲೆ ಇಬ್ಬರು ಅತ್ಯಾಚಾರವೆಸಗಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಮೂವರು ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ದೊಡ್ಡನಾಗಮಂಗಲ ಸಾಯಿ ಲೇಔಟ್‌ನಲ್ಲಿ ವಾಸವಾಗಿರುವ ಯುವತಿಯೊಬ್ಬರು ತಮ್ಮ ಸ್ನೇಹಿತನ ಮನೆಗೆ ಭೇಟಿ ನೀಡಿದ್ದಾಗ ಈ ಘಟನೆ ನಡೆದಿದೆ. ಯುವತಿ ಸ್ನೇಹಿತನ ಮನೆಯಲ್ಲಿದ್ದಾಗ ಇಬ್ಬರು ಆರೋಪಿಗಳು ಬಂದಿದ್ದಲ್ಲದೇ, ಪೊಲೀಸರಿಗೆ ದೂರು ನೀಡುವುದಾಗಿ ಬೆದರಿಸಿ, ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರಂತೆ.

ಅತ್ಯಾಚಾರ ಎಸಗಿ ಹಣಕ್ಕೆ ಬೇಡಿಕೆ: ಅತ್ಯಾಚಾರದ ಬಳಿಕ ಆರೋಪಿಗಳು ಯುವತಿಯಿಂದ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆ ಎನ್ನಲಾಗಿದ್ದು, ಯುವತಿಯ ಬ್ಯಾಂಕ್ ಖಾತೆಯಿಂದ ಬೆಟ್ಟಿಂಗ್ ಆ್ಯಪ್ ಖಾತೆಗೆ ಹಣ ವರ್ಗಾವಣೆ ಮಾಡಿಸಿದ್ದಾರಂತೆ. ಜೊತೆಗೆ, ಆರೋಪಿಗಳು ಯುವತಿಯ ಮತ್ತು ಆಕೆಯ ಸ್ನೇಹಿತನ ಮೊಬೈಲ್ ಫೋನ್‌ಗಳನ್ನು ಕಸಿದುಕೊಂಡಿದ್ದು, ಮನೆಯಲ್ಲಿದ್ದ ಫ್ರಿಡ್ಜ್ ಮತ್ತು ವಾಶಿಂಗ್ ಮೆಷಿನ್‌ನಂತಹ ಗೃಹೋಪಯೋಗಿ ವಸ್ತುಗಳನ್ನು ಸಹ ದೋಚಿಕೊಂಡು ಹೋಗಿದ್ದಾರೆ ಎನ್ನಲಾಗಿದೆ.

ಪರಪ್ಪನ ಅಗ್ರಹಾರ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಜೊತೆಗೆ ಆರೋಪಿಗಳಿಂದ ಕಸಿದುಕೊಂಡಿರುವ ಮೊಬೈಲ್ ಫೋನ್‌ಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲು ಮುಂದಾಗಿದ್ದಾರೆ.