ಬೆಂಗಳೂರು: ಪಾರ್ಕಿಂಗ್ ವಿಚಾರವಾಗಿ ಆರಂಭವಾದ ಗಲಾಟೆ ಹತ್ಯೆಯಲ್ಲಿ ಅಂತ್ಯವಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಶುಕ್ರವಾರ ಸಂಜೆ ಬ್ಯಾಟರಾಯನಪುರ ಠಾಣೆ ವ್ಯಾಪ್ತಿಯ ಟಿಂಬರ್ ಯಾರ್ಡ್ ಬಳಿ ಘಟನೆ ನಡೆದಿದ್ದು, ಫುಡ್ ಡೆಲಿವರಿ ಬಾಯ್‌ನಿಂದ ಚಾಕು ಇರಿತಕ್ಕೊಳಗಾಗಿದ್ದ ಸೆಕ್ಯುರಿಟಿ ಗಾರ್ಡ್ ಗಣೇಶ್ ಬಹುದ್ದೂರ್ ರಾವಲ್ (30) ಮೃತಪಟ್ಟಿದ್ದಾನೆ.
ಹತ್ಯೆಯಾಗಿರುವ ಗಣೇಶ್ ಬಹುದ್ದೂರ್ ರಾವಲ್ ಗಾರ್ಮೆಂಟ್ಸ್‌ವೊಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡಿಕೊಂಡಿದ್ದ. ಅದೇ ಗಾರ್ಮೆಂಟ್ಸ್‌ಗೆ ಗುರುವಾರ ಆರ್ಡರ್ ನೀಡಲು ಡೆಲಿವರಿ ಬಾಯ್ ಬಂದಿದ್ದ. ಈ ವೇಳೆ, ದ್ವಿಚಕ್ರ ವಾಹನ ಪಾರ್ಕಿಂಗ್ ವಿಚಾರದಲ್ಲಿ ಡೆಲಿವರಿ ಬಾಯ್ ಹಾಗೂ ಸೆಕ್ಯುರಿಟಿ ಗಾರ್ಡ್ ನಡುವೆ ವಾಗ್ವಾದವಾಗಿತ್ತು.
ಬಳಿಕ ಡೆಲಿವರಿ ಬಾಯ್ ಸ್ಥಳದಿಂದ ತೆರಳಿದ್ದ. ಶುಕ್ರವಾರ ಸಂಜೆ ನೌಕರರು ಗಾರ್ಮೆಂಟ್ಸ್‌ನಿಂದ ಹೋದ ಬಳಿಕ ಸ್ಥಳಕ್ಕೆ ಬಂದಿದ್ದ ಆರೋಪಿ ಡೆಲಿವರಿ ಬಾಯ್, ಗಣೇಶ್ ಬಹದ್ದೂರ್‌ನ ಹೊಟ್ಟೆಗೆ ಚಾಕು ಇರಿದು ಪರಾರಿಯಾಗಿದ್ದ. ತೀವ್ರವಾಗಿ ರಕ್ತಸ್ರಾವದಿಂದ ಬಳಲುತ್ತಿದ್ದ ಗಣೇಶ್ ಬಹದ್ದೂರ್‌ನನ್ನ ಸ್ಥಳಿಯರ ಸಹಾಯದಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಆತ ಸಾವನ್ನಪ್ಪಿದ್ದಾನೆ.
ಸದ್ಯ ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಗಾಗಿ ತಲಾಶ್ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.