ಮನೆ ಕಾನೂನು ಬೆಂಗಳೂರು: ಆಸ್ತಿಗಾಗಿ ತಂದೆಯ‌ ಕಣ್ಣು ಕಿತ್ತ ಮಗನಿಗೆ 9 ವರ್ಷ ಜೈಲು

ಬೆಂಗಳೂರು: ಆಸ್ತಿಗಾಗಿ ತಂದೆಯ‌ ಕಣ್ಣು ಕಿತ್ತ ಮಗನಿಗೆ 9 ವರ್ಷ ಜೈಲು

0

ಬೆಂಗಳೂರು: ಆಸ್ತಿಗಾಗಿ ಹೆತ್ತ ತಂದೆಯ ಕಣ್ಣುಗಳನ್ನೇ ಕಿತ್ತು ಹಾಕಿದ್ದ ಮಗನಿಗೆ ಇಲ್ಲಿನ ಕೋರ್ಟ್ 9 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 40 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿತು.

ಅಭಿಷೇಕ್(44) ಶಿಕ್ಷೆಗೊಳಗಾದ ಅಪರಾಧಿ.

ಬನಶಂಕರಿ ಶಾಕಾಂಬರಿ ನಗರದಲ್ಲಿ ಅಪರಾಧಿಯ ತಂದೆ ಪರಮೇಶ್ವರ್ (66) ವಾಸವಾಗಿದ್ದರು. ಆಸ್ತಿ ಪತ್ರಕ್ಕೆ ಸಹಿ ಹಾಕಿಲ್ಲ ಎಂಬ ಕಾರಣಕ್ಕಾಗಿ ತಂದೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಅಭಿಷೇಕ್ ಕೊಲೆಯತ್ನ ನಡೆಸಿದ್ದ.‌ 2018ರ ಅಕ್ಟೋಬರ್​ನಲ್ಲಿ‌ ಈ ಘಟನೆ ನಡೆದಿತ್ತು‌.‌

ಜೆ.ಪಿ.ನಗರ ಪೊಲೀಸರು ಅಭಿಷೇಕ್‌ನನ್ನು ಬಂಧಿಸಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸುದೀರ್ಘ ವಿಚಾರಣೆಯ ಬಳಿಕ ಅಪರಾಧವೆಸಗಿರುವುದು ಸಾಬೀತಾಗಿದ್ದು ಇದೀಗ ಕೋರ್ಟ್ ದಂಡ ಸಮೇತ ಶಿಕ್ಷೆ ಪ್ರಕಟಿಸಿದೆ. ದಂಡ ಕಟ್ಟಲು ವಿಫಲನಾದರೆ ಒಂದು ವರ್ಷ ಕಠಿಣ ಶಿಕ್ಷೆ ವಿಧಿಸಬೇಕು.‌‌ ದಂಡ‌ದ ಮೊತ್ತವನ್ನು ಪ್ರಕರಣದ ಸಂತ್ರಸ್ತ ಪರಮೇಶ್ವರ್​ ಅವರಿಗೆ‌ ನೀಡಬೇಕು ಎಂದು ನ್ಯಾ.ಗೋವಿಂದಯ್ಯ ಆದೇಶ ನೀಡಿದ್ದಾರೆ.

ಅಪರಾಧಿ ಅಭಿಷೇಕ್‌‌ ಕೃತ್ಯವೆಸಗಿದ ಬಳಿಕ ಪರಾರಿಯಾಗಿದ್ದ.‌ ಜೆ.ಪಿ.ನಗರ ಪೊಲೀಸರು ಆತನನ್ನು ಬಂಧಿಸಿ ಜೈಲಿಗೆ ಕಳಹಿಸಿದ್ದರು‌. ಬಳಿಕ ಜಾಮೀನಿನ ಮೇರೆಗೆ ಹೊರಬಂದಿದ್ದ. ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ.‌ ಕೋರ್ಟ್ ಸೂಚನೆ ಮೇರೆಗೆ ಆತನನ್ನು ಮತ್ತೆ ಬಂಧಿಸಲಾಗಿತ್ತು.