ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ದುರಂತದಲ್ಲಿ 11 ಮಂದಿ ದುರ್ಮರಣಕ್ಕೆ ಒಳಗಾದ ಹಿನ್ನೆಲೆಯಲ್ಲಿ, ಪ್ರಕರಣಕ್ಕೆ ಸಂಬಂಧಪಟ್ಟಂತೆ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ (ಕೆಎಸ್‌ಸಿಎ) ವಿರುದ್ಧ ದಾಖಲಾದ ಎಫ್‌ಐಆರ್‌ನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಕೆಎಸ್‌ಸಿಎ ಅಧಿಕಾರಿಗಳಿಗೆ ಷರತ್ತುಬದ್ಧ ರಿಲೀಫ್ ದೊರೆತಿದೆ.
ಹೈಕೋರ್ಟ್ ಏಕಸದಸ್ಯ ಪೀಠ ಈ ಕುರಿತು ವಿಚಾರಣೆ ನಡೆಸಿದ್ದು, ಅಧಿಕಾರಿಗಳ ವಿರುದ್ಧ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಆದೇಶ ನೀಡಿದೆ. ಆದರೆ, ವಿಚಾರಣೆಗೆ ಸಹಕರಿಸಬೇಕು ಎಂಬ ಷರತ್ತಿನೊಂದಿಗೆ ರಿಲೀಫ್ ದೊರೆತಿದೆ.
ಕೆಎಸ್‌ಸಿಎ ಅಧ್ಯಕ್ಷ ರಘುರಾಮ್ ಭಟ್, ಕಾರ್ಯದರ್ಶಿ ಎ. ಶಂಕರ್ ಹಾಗೂ ಖಜಾಂಚಿ ಇ.ಎಸ್. ಜಯರಾಮ್ ಅವರಿಗೆ ಬಿಗ್ ರಿಲೀಫ್ ಸಿಕ್ಕಿದಂತಾಗಿದೆ.
ವಿಚಾರಣೆಯ ವೇಳೆ ಏನೆಲ್ಲ ನಡೆಯಿತು?
- ಅರ್ಜಿದಾರರ ಪರ ಹಿರಿಯ ವಕೀಲರು ಶ್ಯಾಮ್ ಸುಂದರ್ ಹಾಗೂ ಅಶೋಕ್ ಹಾರನಹಳ್ಳಿ ವಾದ ಮಂಡಿಸಿದರು.
- ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ (ಎಜಿ) ಶಶಿಕಿರಣ್ ಶೆಟ್ಟಿ ಹಾಜರಿದ್ದರು.
- ನ್ಯಾಯಾಧೀಶರು: “ಮೂರು ಎಫ್‌ಐಆರ್‌ಗಳಲ್ಲಿ ಒಂದೇ ಆರೋಪಿಗಳಿದ್ದಾರಾ?” ಎಂದು ಪ್ರಶ್ನಿಸಿದರು.
- ಎಜಿ: “ಹೌದು. ಪ್ರತ್ಯೇಕವಾಗಿ ಮ್ಯಾಜಿಸ್ಟೀರಿಯಲ್, ನ್ಯಾಯಾಂಗ ಹಾಗೂ ಸಿಐಡಿ ತನಿಖೆ ನಡೆಯುತ್ತಿದೆ” ಎಂದು ಉತ್ತರಿಸಿದರು.
- ವಕೀಲ ಶ್ಯಾಮ್ ಸುಂದರ್: “ನಾಲ್ವರನ್ನು ಬಂಧಿಸಲಾಗಿದೆ. ಬೆಳಗಿನ ಜಾವ 4.30ಕ್ಕೆ ನಿಖಿಲ್ ಎಂಬವರನ್ನು ಬಂಧಿಸಿದರು” ಎಂದರು.
- ಹೈಕೋರ್ಟ್: “ವಿನಾಕಾರಣ ಯಾರಾದರೂ ಬಂಧನೆಗೆ ಒಳಪಟ್ಟರೆ ಅದು ಸಮಸ್ಯೆಯಲ್ಲವೇ?” ಎಂದು ಪ್ರಶ್ನಿಸಿದರು.
- ವಕೀಲ ಅಶೋಕ್ ಹಾರನಹಳ್ಳಿ: “ಈ ಬಂಧನೆಗಳು ಸಿಎಂ ಸಿದ್ದರಾಮಯ್ಯ ಅವರ ಸೂಚನೆಯ ಮೇರೆಗೆ ನಡೆದಿದೆ” ಎಂದು ಗಂಭೀರ ಆರೋಪವನ್ನು ಹೊರಹಾಕಿದರು.
ರಕ್ಷಣೆ ಕೋರಲು ಕಾರಣವೇನು?
- ಕೆಎಸ್‌ಸಿಎ ವಿರುದ್ಧ ನಾನಾ ಎಫ್ಐಆರ್‌ಗಳು ದಾಖಲಾಗಿ, ತನಿಖೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಅಧಿಕಾರಿಗಳ ವಿರುದ್ಧ ನ್ಯಾಯಾತೀತ ಕ್ರಮ ಕೈಗೊಳ್ಳದಂತೆ ವಿನಂತಿಸಲಾಗಿದೆ.
- ನ್ಯಾಯಮೂರ್ತಿ ಮೈಕಲ್ ಕುನ್ಹಾ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಯುತ್ತಿದೆ, ಜೊತೆಗೆ ಮ್ಯಾಜಿಸ್ಟೀರಿಯಲ್ ಹಾಗೂ ಸಿಐಡಿ ತನಿಖೆಗಳೂ ಪ್ರಕ್ರಿಯೆಯಲ್ಲಿವೆ.
ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್ ಏಕಸದಸ್ಯ ಪೀಠ ಕೆಎಸ್‌ಸಿಎ ಅಧಿಕಾರಿಗಳ ವಿರುದ್ಧ ಬಲವಂತದ ಕ್ರಮ ಬೇಡ ಎಂದು ಮಧ್ಯಂತರ ಆದೇಶ ನೀಡಿದೆ.














