ಬೆಂಗಳೂರು: ಜಾಮೀನು ಪಡೆಯುವ ವೇಳೆ ನಕಲಿ ಶ್ಯೂರಿಟಿ ಸಲ್ಲಿಸಿ ನ್ಯಾಯಾಲಯಕ್ಕೆ ಮೋಸ ಮಾಡಿರುವುದು ದಾಖಲೆ ಪರಿಶೀಲನೆ ವೇಳೆ ತಿಳಿದ್ದಿದ್ದು, ಆರೋಪಿಗಳ ವಿರುದ್ಧ ಸಿಸಿಬಿಯಲ್ಲಿ ಎಫ್ಐಆರ್ ದಾಖಲಾಗಿದೆ.
2021ರಲ್ಲಿ ಕಾಡುಗೋಡಿ ಪೊಲೀಸರು ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆಯಡಿ ಆದಿತ್ಯಮ್ ಎಂಬುವುನನ್ನು ಬಂಧಿಸಿದ್ದರು. ಆರೋಪಿಗೆ ನ್ಯಾಯಾಲಯ ಜಾಮೀನು ನೀಡಿತ್ತು. ಆರೋಪಿ ಆದಿತ್ಯಮ್ ಕಡೆಯವರು ಜಾಮೀನಿಗಾಗಿ ನ್ಯಾಯಾಲಯಕ್ಕೆ ನಕಲಿ ಶ್ಯೂರಿಟಿ ಸಲ್ಲಿಸಿದ್ದರು.
ಚಿಕ್ಕಬಳ್ಳಾಪುರ ಮೂಲದ ಓರ್ವ ರೈತರ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್, ನಕಲಿ ಜಮೀನು ದಾಖಲೆಗಳನ್ನು ಸೃಷ್ಟಿಸಿದ್ದರು. ನಕಲಿ ದಾಖಲೆಗಳಲ್ಲದೆ ಈತನೇ ಜಮೀನು ಮಾಲಿಕ ಅಂತ ನಕಲಿ ವ್ಯಕ್ತಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ವಿಚಾರ ತಿಳಿದ ಚಿಕ್ಕಬಳ್ಳಾಪುರ ಮೂಲದ ರೈತ ಸಿಸಿಬಿಗೆ ದೂರು ನೀಡಿದ್ದರು. ಪೊಲೀಸರ ತಪಾಸಣೆ ವೇಳೆ ದಾಖಲೆ ಪತ್ರಗಳು ನಕಲಿ ಎಂದು ತಿಳಿದು ಬಂತು. ಸದ್ಯ ಸಿಸಿಬಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದೇ ರೀತಿ ನಿವೃತ ಎಎಸ್ಐ ಅಧಿಕಾರಿಯ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ನ್ಯಾಯಾಲಯಕ್ಕೆ ಶ್ಯೂರಿಟಿ ಸಲ್ಲಿಸಲಾಗಿತ್ತು. ಸಿದ್ದಾಪುರ ಪೊಲೀಸರು ಫೋಕ್ಸೋ ಪ್ರಕರಣದಲ್ಲಿ ನವೀದ್ ಪಾಷ ಎಂಬಾತನನ್ನು ಬಂಧಿಸಿದ್ದರು. ಆರೋಪಿ ಕಡೆಯವರು ಜಾಮೀನು ವೇಳೆ ನಕಲಿ ಶ್ಯೂರಿಟಿ ಸಲ್ಲಿಸಿದ್ದರು. ನಿವೃತ್ತ ಎಎಸ್ಐ ಅಧಿಕಾರಿ ಹೆಸರಿನ ನಕಲಿ ಆಧಾರ್ ಕಾರ್ಡ್, ಜಮೀನು ದಾಖಲೆಗಳನ್ನು ಸೃಷ್ಟಿಸಿ ನ್ಯಾಯಾಲಯಕ್ಕೆ ಶ್ಯೂರಿಟಿ ಸಲ್ಲಿಸಿದ್ದರು. ಪೊಲೀಸ ತಪಾಸಣೆ ನಡೆಸಿದಾಗ ನಕಲಿ ದಾಖಲೆಗಳನ್ನು ಸಲ್ಲಿಸಿರುವುದು ಬಯಲಾಗಿದೆ.