ಮನೆ ಅಪರಾಧ ಬೆಂಗಳೂರು: ಕರ್ತವ್ಯ ಲೋಪವೆಸಗಿದ ಸಾರಿಗೆ ಇಲಾಖೆ ಎಸ್‌ಡಿಎ ಅಮಾನತು

ಬೆಂಗಳೂರು: ಕರ್ತವ್ಯ ಲೋಪವೆಸಗಿದ ಸಾರಿಗೆ ಇಲಾಖೆ ಎಸ್‌ಡಿಎ ಅಮಾನತು

0

ಬೆಂಗಳೂರು: ರಾಜ್ಯ ಸಾರಿಗೆ ಇಲಾಖೆಯಲ್ಲಿ ಗಂಭೀರ ಕರ್ತವ್ಯ ಲೋಪ ನಡೆದಿದ್ದು, ಬಳ್ಳಾರಿಯ ಪ್ರಾದೇಶಿಕ ಸಾರಿಗೆ ಕಛೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) ರವಿ ತಾವರಖೇಡಾ ಅವರನ್ನು ಸರ್ಕಾರ ಅಮಾನತುಗೊಳಿಸಿದೆ. ಅವರಿಗೆ ಸರ್ಕಾರದ ಖಜಾನೆಗೆ ಪಾವತಿಸಬೇಕಾದ ₹16.72 ಲಕ್ಷ ಮೊತ್ತವನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸದೆ ಕರ್ತವ್ಯ ಲೋಪವೆಸಗಿದ ಆರೋಪವಿದೆ.

ಸಾರಿಗೆ ಮತ್ತು ಶಿಸ್ತು ಪ್ರಾಧಿಕಾರದ ಆಯುಕ್ತರು ನೀಡಿದ ಆದೇಶದ ಪ್ರಕಾರ, ಖಜಾನೆ ವಿಭಾಗದಲ್ಲಿ ಪ್ರತಿದಿನದ ಸಂಗ್ರಹವಾಗುವ ತೆರಿಗೆ, ಶುಲ್ಕ ಹಾಗೂ ದಂಡದ ಮೊತ್ತವನ್ನು ಕೆಎಫ್‌ಸಿ & ಕೆಟಿಸಿ ನಿಯಮದ ಪ್ರಕಾರ ಅದೇ ದಿನ ಅಥವಾ ಮುಂದಿನ ಕಾರ್ಯದಿನದಲ್ಲಿ ಸರ್ಕಾರದ ಲೆಕ್ಕ ಶೀರ್ಷಿಕೆಗೆ ಕೆ-2 ಚಲನ್ ಮೂಲಕ ಪಾವತಿಸಬೇಕಾಗಿತ್ತು. ಆದರೆ, 2025ರ ಮೇ 21 ರಿಂದ 31ರ ತನಕದ ಒಟ್ಟು 7 ಕಾರ್ಯದಿನಗಳಲ್ಲಿ ಸಂಗ್ರಹವಾದ ₹16,72,518ನ್ನು ಸರ್ಕಾರದ ಖಜಾನೆಗೆ ಸಲ್ಲಿಸಲಾಗಿರಲಿಲ್ಲ.

ಈ ಹಣ ತಾತ್ಕಾಲಿಕವಾಗಿ ನಿಜವಾಗಿಯೂ ದುರುಪಯೋಗವಾಗಿದೆಯೇ ಎಂಬ ಅನುಮಾನಗಳು ಮೇಲ್ನೋಟಕ್ಕೆ ಕಂಡು ಬಂದಿದ್ದು, ಪ್ರಾದೇಶಿಕ ಸಾರಿಗೆ ಕಛೇರಿಯ ಅಧೀಕ್ಷಕ ಶ್ರೀ ವೀರೇಶ ಅವರ ದೂರಿನ ಮೇರೆಗೆ ಬಳ್ಳಾರಿಯ ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ದಿನಾಂಕ 08-06-2025 ರಂದು ಎಫ್‌ಐಆರ್ ಸಂಖ್ಯೆ: 139/2025 ದಾಖಲಿಸಲಾಗಿದೆ.

ದೂರಿನಲ್ಲಿ, ಸಾರ್ವಜನಿಕರಿಂದ ಸಂಗ್ರಹಿಸಿದ ಹಣವನ್ನು ಸರಿಯಾದ ರೀತಿಯಲ್ಲಿ ಖಜಾನೆಗೆ ಜಮೆ ಮಾಡದೇ, ಸರ್ಕಾರದ ಹಣದ ದುರುಪಯೋಗ ಮತ್ತು ನಂಬಿಕೆ ದ್ರೋಹಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿದೆ. ಈ ಸಂದರ್ಭದಲ್ಲಿ, ಎಸ್‌ಡಿಎ ರವಿ ತಾವರಖೇಡಾ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಇಲಾಖೆಯು ಕ್ರಮಕೈಗೊಂಡಿದೆ.

ಸರ್ಕಾರವು ಈ ಘಟನೆಗೆ ಗಂಭೀರವಾಗಿ ಪ್ರತಿಕ್ರಿಯಿಸಿದ್ದು, ಯಾವುದೇ ಸರ್ಕಾರಿ ಹಣ ವ್ಯವಹಾರದಲ್ಲಿ ಜವಾಬ್ದಾರಿ ತಪ್ಪಿದರೆ ಬಾರದ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ. ಅಂತೆಯೇ, ಇತರ ಇಲಾಖೆಗಳಲ್ಲಿ ಇಂತಹ ಕರ್ತವ್ಯ ಲೋಪ ಪುನರಾವೃತವಾಗದಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.