ಬೆಂಗಳೂರು: ಮಹಾ ಕುಂಭಮೇಳಕ್ಕೆ ತೆರಳುತ್ತಿದ್ದ ಬೆಂಗಳೂರಿನ ಮಹಿಳೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಮಧ್ಯಪ್ರದೇಶ ಕಟ್ನಾದಲ್ಲಿ ನಡೆದಿದೆ.
ಅಪಘಾತದಲ್ಲಿ ಐವರಿಗೆ ಗಂಭೀರ ಗಾಯವಾಗಿದ್ದು, ಮಧ್ಯಪ್ರದೇಶದ ಕಟನಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಬೆಂಗಳೂರಿನಿಂದ ಟಿಟಿ ವಾಹನದಲ್ಲಿ ತೆರಳುತ್ತಿದ್ದರು. ಮಾರ್ಗ ಮಧ್ಯೆ ಲಾರಿ ಹಾಗೂ ಟಿಟಿ ವಾಹನ ನಡುವೆ ಅಪಘಾತ ಸಂಭವಿಸಿದೆ. ಟಿಟಿ ವಾಹನದಲ್ಲಿದ್ದ ಮಹಿಳೆ ಮೃತಪಟ್ಟಿದ್ದಾರೆ. ಇನ್ನು, ಗಾಯಾಳುಗಳನ್ನು ಬೆಂಗಳೂರಿಗೆ ಸ್ಥಳಾಂತರಿಸುವಂತೆ ಕುಟುಂಬಸ್ಥರಾದ ವಾಣಿ, ಸತೀಶ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಇನ್ನು, ಕಳೆದ ತಿಂಗಳು ಪ್ರಯಾಗ್ರಾಜ್ ಮಹಾ ಕುಂಭಮೇಳಕ್ಕೆ ತೆರಳಿ ಯಾತ್ರೆ ಮುಗಿಸಿ ವಾಪಸ್ ಬರುತ್ತಿದ್ದಾಗ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ಕರ್ನಾಟಕದ ಇಬ್ಬರು ಯುವಕರು ಮೃತಪಟ್ಟಿದ್ದರು. ಉತ್ತರಪ್ರದೇಶದ ಮಿರ್ಜಾಪುರ ಬಳಿ ಅಪಘಾತ ಸಂಭವಿಸಿತ್ತು. ಮೈಸೂರು ತಾಲೂಕಿನ ಮಂಟಿಕ್ಯಾತನಹಳ್ಳಿ ನಿವಾಸಿ ರಾಮಕೃಷ್ಣ ಶರ್ಮಾ, ಮಂಡ್ಯ ಜಿಲ್ಲೆ ಶ್ರೀರಂಗಪಟ್ಟ ತಾಲೂಕಿನ ಕೆಆರ್ಎಸ್ ನಿವಾಸಿ ಅರುಣ್ ಶಾಸ್ತ್ರಿ ಮೃತ ದುರ್ದೈವಿಗಳು.
ಯುವಕರು ಎರಡು ಕಾರುಗಳಲ್ಲಿ ಪ್ರಯಾಗ್ರಾಜ್ ಯಾತ್ರೆಗೆ ಹೋಗಿದ್ದರು. ಪ್ರಯಾಗ್ರಾಜ್ ಯಾತ್ರೆ ಮುಗಿಸಿ ಕಾಶಿಗೆ ಬರುತ್ತಿದ್ದಾಗ ಮಿರ್ಜಾಪುರದ ಬಳಿ ಲಾರಿ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿತ್ತು. ಈ ವೇಳೆ ತಲೆಗೆ ತೀವ್ರ ಪೆಟ್ಟು ಬಿದ್ದು ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಿಸದೆ ರಾಮಕೃಷ್ಣ ಶರ್ಮಾ ಮತ್ತು ಅರುಣ್ ಶಾಸ್ತ್ರಿ ಮೃತಪಟ್ಟಿದ್ದರು.