ಮನೆ ದೇವಸ್ಥಾನ ಭದ್ರಕಾಳಿ ಅವತಾರ

ಭದ್ರಕಾಳಿ ಅವತಾರ

0

ಒಮ್ಮೆ ದೇವರ್ಷಿ ನಾರದರು ದಾರುಕನಿಗೆ ನೀತಿ ಪಾಠ ಹೇಳಲು ಅವನ ಆಸ್ಥಾನಕ್ಕೆ ʼನಾರಾಯಣʼ ನಾಮ ಹೇಳುತ್ತಾ ಬಂದರು.

ರಕ್ಕಸಕುಲದ ಜನ್ಮ ವೈರಿಯಾದ ನಾರಾಯಣನ ಚಪಿಸುತ್ತಿರುವ ನಾರದರನ್ನ ಕಟ್ಟಿ ಹಾಕಲು ದಾರುಕನು ತನ್ನವರಿಗೆ ಆಜ್ಞಾಪಿಸಿದನು. ತಪ್ಪಿಸಿಕೊಂಡ ನಾರದರೂ ನೇರವಾಗಿ ಕೈಲಾಸಕ್ಕೆ ತೆರಳಿ, ಪರಶಿವನೋಡನೆ ವಿವರ ತಿಳಿಸಿದನು. ಯುಧ್ಧಕ್ಕಾಗಿ ತೆರಳಿದ್ದ ಕನ್ನಿಕೆಯರು ಮರೆಯಾಗಿರುವುದನ್ನೂ, ದಾರುಕನ ಉದ್ಧಟತನವನ್ನೂ ತಿಳಿದಂತಹ ಶಿವನು ಕೋಪದಿಂದ ಕಿಡಿಕಿಡಿಯಾದನು.  ದೇವತೆಗಳೆಲ್ಲರೂ ನೋಡುತ್ತಿದ್ದಂತೆಯೇ ಪರಮೇಶ್ವರನ್ನು ಪ್ರಳಯಕಾಲದ ಶಿವನೇ ಆಗಿ ರುದ್ರಾವತಾರ ತಾಳಿದನು. ಆಗ ಅವನ ಹಣೆಗಣ್ಣಿನಿಂದ ಕಿಡಿಯೊಂದು ಹಾರಿತು.  ಭೂ ಸ್ಪರ್ಶವಾದೊಡನೆಯೇ ಅದು ಸಹಸ್ರ ಬಾಹುಗಳುಳ್ಳ ಮೇಘ ಸ್ವರೂಪದ, ಕಾಳ-ಕರಾಳ ನೇತ್ರಗಳ ಭಯಂಕರವಾದ ಸ್ತ್ರೀ ರೂಪ ತಾಳಿ ಅಟ್ಟಹಾಸಿಸುತ್ತಾ ಸಮಸ್ತ ಸೃಷ್ಟಿಯನ್ನೇ ನುಂಗಲು ಬಾಯಿ ತೆರೆಯುತ್ತಾ ಮುನ್ನುಗ್ಗಲನೆಯಾಯಿತು. ದಾರಿ ಕಾಣದ ತ್ರಿಮೂರ್ತಿಗಳು, ಇತರ ದೇವತೆಗಳು ಆಕೆಯನ್ನು ಹಾಡಿ ಹೊಗಳು ಶಾಂತಗೊಳ್ಳಲು ಕೇಳಿಕೊಂಡರು. ಜಗನ್ಮಾತೆಯಾದ ಪಾರ್ವತಿಯೂ ಸ್ವತಃ ತಾನೇ ಆ ಘೋರ ರೂಪವನ್ನು ಸುತ್ತಿಸಿ ಪ್ರಾರ್ಥಿಸಿದಳು.  ಆಗ ಆ ಭೀಕರ ರೂಪವು, ಶಾಂತ ಮೂರ್ತಿ ಆಯ್ತು. ಕಂಠದಲ್ಲಿ ಕಾಳಿಮಯವೂ, ಮೇಘವರ್ಣದವಳೂ ಆದ ಕಂಠಕಾಳಿಯನ್ನು “ಭದ್ರಕಾಳಿ” ಎಂದು ಹೆಸರಿಸಿ ದೇವತೆಗಳೆಲ್ಲರೂ ಸ್ತುತಿಸಿದರು. ಶಾಂತಳಾದಂತಹ ಕಾಳಿಯು ತನ್ನ ಜನ್ಮಕ್ಕೆ ಉದ್ದೇಶವನ್ನು ತಿಳಿಯಪಡಿಸಬೇಕೆಂದು ಜನನಿ-ಜನಕರಾದ ಶಿವ-ಪಾರ್ವತಿಯರನ್ನ ಕೇಳಿದಳು.      

ಅವಳು ಲೋಕಂಟಕನಾದ ದಾರುಕಾಸುರನ ವೃತ್ತಾಂತವನಲ್ಲ ವಿವರಿಸಿ, ಅವನ ಅಂತ್ಯವೇ ನಿನ್ನ ಸೃಷ್ಟಿಗೆ ಕಾರಣವೆಂದು ತಿಳಿಸಿ, ಮರೆಯಾಗಿದ್ದ ಷಟ್ ಕನ್ನಿಕೆಯರನ್ನು ಕರೆಸಿ, ಅವರನ್ನು ಒಟ್ಟುಗೂಡಿಸಿ, “ಸಪ್ತಮಾತೃಕೆ”ಯರೆಂದು ಕರೆದು, ದಾರುಕನ ಸಂಹಾರ ಕಾರ್ಯಯವು ಶೀಘ್ರವಾಗಿ ನೆರವೇರಲಿ ಎಂದು ಹಾರೈಸಿದರು, ದೇವತೆಗಳೆಲ್ಲರೂ ಕೈ ಮುಗಿದು ಶುಭ ಕೋರಿದರು. ಸಮಸ್ತ ದೇವಾದಿ ದೇವತೆಗಳ ಇಚ್ಛೆಯಾಗಿರುವ ದಾರುಕಾಸುರನ ಸಂಹಾರಕ್ಕಾಗಿ ಭದ್ರಕಾಳಿಯ ನೇತೃತ್ವದಲ್ಲಿ ಮಾತ್ರ ಸಕಲ ಅಸ್ತ್ರಧಾರಿಗಳಾಗಿ ದೇವಸೈನ್ಯನ್ನೊಳಗೊಂಡು ದಾರಿಕಾಪುರಿಯನ್ನು ಪ್ರವೇಶಿಸಿ, ಅಟ್ಟಹಾಸದಿಂದಲೇ ದಾರುಕನನ್ನ ಕಾಳಗಕ್ಕೆ ಕರೆದರು.

ರಣಘೋರ ಸಂಗ್ರಾಮ :

ತನ್ನಿಂದ ಈ ಹಿಂದೆ ಸೋಲುಂಡ ಪಲಾಯನ ಮಾಡಿದಂತಹ ಕನ್ನಿಕೆಯರು ಮತ್ತೋರ್ವ ಕಾಳಾರೂಪಿ ಸ್ತ್ರೀಯರನ್ನು ಮುಂದಿರಿಸಿಕೊಂಡು ದಾರುಕಾಪುರಿಯನ್ನು ನಾಶಗೊಳಿಸುವುದನ್ನು ಕಂಡಂತಹ ದಾರುಕಾಸುರನು ಕೋಪದಿಂದ ಕೆಂಡದಂತಾದನು. ಆತನು ತನ್ನ ಚತುರಂಗ ಬಲವನ್ನ ಕೂಡಿಕೊಂಡು ಕನ್ನಿಕೆಯ ಮೇಲೆ ಬಾಣಗಳ ಮಳೆಗೆರೆದನು. ವಿಶ್ವದ ಎಂಟು ದಿಕ್ಕುಗಳಲ್ಲಿ ಧಾರುಕಾಸುರನ ಬಾಣಗಳು ಆವರಿಸಿ ಕಾರ್ಗತ್ತಲೆಯು ಮುಸುಕಿದಂತಾಯಿತು. ಸಪ್ತಮಾತೃಕೆಯರು ಅಸುರನನ್ನು, ಅವನ ಸೈನ್ಯವನ್ನು ಸೆದೆಬಡಿದರು. ಕೆಲವರನ್ನು ಸೀಳಿ ಓಗೆದರು. ದಾರುಕನ ಸೇನೆಯಲ್ಲಿರುವ ಆನೆ, ಕುದುರೆ, ರಥ, ಸೈನಿಕರನ್ನೆಲ್ಲ ಕೊಂದರು. ಆನೆಯಂತಿರುವ ರಕ್ಕಸರ ತಲೆಗಳನ್ನು ಕತ್ತರಿಸಿ ಹಾಕಿದರು. ಆಗ ಅಸುರನ ಸೈನ್ಯದಲ್ಲಿ ಭಯಂಕರವಾದ ಗೊಂದಲ ಉಂಟಾಯಿತು. ಅಸುರರಕ್ತವು ಹೊಳೆಯಾಗಿ ಹರಿಯತೊಡಗಿತು, ಹರಿದು ಬಯಲು ಪ್ರದೇಶಕ್ಕೆ ಬಿದ್ದ ಕರುಗಳು, ಮಾಂಸದ ತುಂಡುಗಳು, ಮೆದುಳು ಬೋಂಡಗಳು, ಆನೆ-ಕುದುರೆಗಳು, ಪರ್ವತಾಕಾರದ ರಕ್ಕಸರ ಕಳೇಬರಗಳು ಇವುಗಳಿಂದಾಗಿ ರಣಭೂಮಿಯು ಭೀಕರವಾಗಿ ಘೋಷಿಸಿರುವುದನ್ನು ಕಂಡು, ಅದೇ ಸಮಯ ಕಾಯುತ್ತಿದ್ದ ಪಿಶಾಚಿಗಳು ಅಲ್ಲಿ ನೆರೆದವು. ತಮ್ಮ ಪಿತೃಗಳಿಗೆ ಆ ರಕ್ತ ಮಾಂಸಗಳಿಂದ ಪಿಂಡ ಪ್ರಧಾನ ಶ್ರದ್ಧಾವಿಧಿಯನ್ನು ವೈಭವದಿಂದ ಮಾಡತೊಡಗಿದವು.

ಬೇತಾಳಗಳು ಮುಂಡಗಳನ್ನೆಲ್ಲ ಮದ್ದಲಿಯಂತೆ ಬಾರಿಸಿದವು. ಆನೆಯ ಸೊಂಡಿಲುಗಳೆ ಕಹಳೆಗಳಾದವು, ರುಂಡಗಳೇ ಚೆಂಡುಗಳಾದವು, ಕುದುರೆಯ ಗೊರಸುಗಳಿಂದ ತಾಳ ಹಾಕಿದವು. ಕಂಡ ಕಂಡ ಹಾಗೆ ಕುಣಿದಾಡುವುದೇ ಆ ಪಿಶಾಚಿಗಳಿಗೆ ಅಭೂತವಾದ ನೃತ್ಯವಾಗಿತು. ಹೀಗೆ ರಣಭೂಮಿಯ ತುಂಬೆಲ್ಲ ತಂಡ ತಂಡವಾಗಿ ಪಿಶಾಚಿಗಳು ಕುಣಿದಾಡಿದವು. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ದಾರುಕಾಸುರರು ಹುಟ್ಟುತ್ತಿದ್ದರೂ, ಇವರನ್ನೆಲ್ಲ ಹಿಮ್ಮೆಟ್ಟಿಸಿ ಮೂರ್ಛಿತಗೊಳಿಸಿ, ರಕ್ಕಸರ ಸೇನೆಯನ್ನು ನಿರ್ನಾಮ ಗೊಳಿಸುತ್ತಿರುವ ಕನ್ನಿಕೆಯರನ್ನು ಓಡಿಸಲು ದಾರಿ ಕಾಣದಾದ ದಾರುಕನು ಕೊನೆಯಾಸ್ತ್ರವಾಗಿ  ಬ್ರಹ್ಮದಂಡವನ್ನು ಎತ್ತಿದನು.

ಬ್ರಹ್ಮಾಸ್ತ್ರ ಪ್ರಯೋಗ :

ದಾರುಕಾಸುರನು ಬ್ರಹ್ಮಾಸ್ತ್ರವನ್ನು ಹಿಡಿದು ಅಭಿಮಂತ್ರಿಸಿ, ಧನುಸ್ಸಿಗೆ ಹೂಡಿದನು. ಈ ಬ್ರಹ್ಮಾಸ್ತ್ರದ ಪುಂಕಗಳಲ್ಲಿ ವಾಯುದೇವವನ್ನು, ಹಲಗಿನಲ್ಲಿ ಸೂರ್ಯನು, ಅಗ್ನಿಯೂ ಇದ್ದು ಸರ್ವಭೂತಗಳ ತೇಜಸ್ಸನ್ನು ಹೊಂದಿ ಕೋಟಿ ಸೂರ್ಯನಂತೆ ಪ್ರಕಾಶಮಾನವಾಗಿತ್ತು. ತೀಕ್ಷ್ಣವಾದ ವೇಗವುಳ್ಳದಾಗಿದ್ದು ಸರ್ಪದಂತೆ ಕಿಡಿಯುಗುಳುತ್ತಿತ್ತು. ಸಮಸ್ತ ಅಸ್ತ್ರಗಳಲ್ಲಿಯೂ ಅತ್ಯಂತ ಪ್ರಬಲವಾದ ಅಸ್ತ್ರ ಅದು. ಅಲಗಿನ ತುದಿಯಿಂದ ʼಭುಗಿಲ್ ಭುಗಿಲ್ʼ ಎನ್ನತ್ತಾ ದಟ್ಟವಾದ ಉರಿಯು ಹೊರಟಿತು. ಕಿಡಿಗಳು ಮೇರೆ ತಪ್ಪಿ ಧ್ರುವಲೋಕದವರೆಗೂ ಹಾರಿದವು, ಅಕ್ಷಯವಾದ ಹೊಗೆಯು ಮೂರು ಲೋಕಗಳಲ್ಲಿ ಪಸರಿಸಿಕೊಂಡಿತು. ಊರಿಯಿಂದ ಭೂಮಿ ಇಬ್ಬಾಗವಾಯಿತು. ಪರ್ವತಗಳು ಪುಡಿಪುಡಿಯಾಗಿ ಉದುರಿದವು, ಕಿಚ್ಚಿನ ಝಳದಿಂದ ಸಮುದ್ರದ ನೀರು ಕುದಿಯ ತೊಡಗಿತು.

ದಾರುಕಾಪೂರಿಯ ಯುದ್ಧ ಗತಿಯನ್ನು ತಿಳಿಯದ ದೇವತೆಗಳು ವಿಶ್ವದ ಈ ಅಲ್ಲೋಲಕಲ್ಲೋಲ ಸ್ಥಿತಿಯನ್ನು ಕಂಡು ಹೆದರಿದರು. ಬ್ರಹ್ಮಾಸ್ತ್ರವು ತಮ್ಮನ್ನೇ ಗುರಿಯಾಗಿರಿಸಿ ಬರುವುದನ್ನ ಕಂಡು “ಶಂಕರ, ಸದಾಶಿವ, ಸರ್ವ ಜಗತ್ತುಗಳನ್ನು ನೀನೆ ಕಾಪಾಡು” ಎನ್ನುತ್ತಾ, ಗೋಳಾಡಿದರು. ಸರ್ವರೂ ಬ್ರಹ್ಮಾಸ್ತ್ರವನ್ನು ನೀಡಿದಂತಹ ಬ್ರಹ್ಮನಿಗೆ ಮೊರೆಯಿಟ್ಟರು. ಆತನು ದೇವತೆಗಳ ಉಳಿವಿಗಾಗಿ ಬ್ರಹ್ಮಾಸ್ತ್ರವನ್ನು ಗೌರವಿಸಿ ಶಾಂತಗೊಳಿಸಿದನು. ದೇವತೆಗಳು ಪ್ರಾಣಭಯದಿಂದ ಪಾರಾದರೂ ದಾರುಕನ ವಧೆಯ ಕುರಿತಾಗಿ ಚಿಂತಿತರಾದರು.

-ಮುಂದುವರೆಯುತ್ತದೆ…

ಹಿಂದಿನ ಲೇಖನಪೂರ್ವಫಾಲ್ಗುಣಿ
ಮುಂದಿನ ಲೇಖನಇಂಡಿಯನ್ ಬ್ಯಾಂಕ್: 02 ಮುಖ್ಯ ವ್ಯವಸ್ಥಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನ