ಮನೆ ಕಾನೂನು ಶಾಲಾ ಪಠ್ಯದಲ್ಲಿ ಭಗವದ್ಗೀತೆ: ಕೇಂದ್ರ, ರಾಜ್ಯ ಸರ್ಕಾರಕ್ಕೆ ಗುಜರಾತ್‌ ಹೈಕೋರ್ಟ್‌ ನಿಂದ ನೋಟಿಸ್‌ ಜಾರಿ

ಶಾಲಾ ಪಠ್ಯದಲ್ಲಿ ಭಗವದ್ಗೀತೆ: ಕೇಂದ್ರ, ರಾಜ್ಯ ಸರ್ಕಾರಕ್ಕೆ ಗುಜರಾತ್‌ ಹೈಕೋರ್ಟ್‌ ನಿಂದ ನೋಟಿಸ್‌ ಜಾರಿ

0

ಅಹಮದಾಬಾದ್ (Ahmedabad): ಭಗವದ್ಗೀತೆಯನ್ನು ಮಕ್ಕಳಿಗೆ ಪಠ್ಯವಾಗಿ ಪರಿಚಯಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಗುಜರಾತ್ ಹೈಕೋರ್ಟ್ ಸೋಮವಾರ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಮಾಡಿದೆ.

ಗುಜರಾತ್‌ನ 6ರಿಂದ 12ನೇ ತರಗತಿಯ ಮಕ್ಕಳಿಗೆ ಪ್ರಸ್ತಕ ಶೈಕ್ಷಣಿಕ ವರ್ಷ 2022–23ರಲ್ಲಿ ಪಠ್ಯವಾಗಿ ಭಗವದ್ಗೀತೆಯನ್ನು ಪರಿಚಯಿಸುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ (ಪಿಐಎಲ್) ಸಂಬಂಧಿಸಿದಂತೆ ಗುಜರಾತ್ ಹೈಕೋರ್ಟ್ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಶಾಲಾಪಠ್ಯದ ಭಾಗವಾಗಿ ಭಗವದ್ಗೀತೆಯನ್ನು ಅಳವಡಿಸುವ ಸರ್ಕಾರದ ನಿರ್ಣಯಕ್ಕೆ ತಡೆ ನೀಡಲು ನಿರಾಕರಿಸಿದ ನ್ಯಾಯಮೂರ್ತಿಗಳಾದ ಅರವಿಂದ ಕುಮಾರ್ ಮತ್ತು ಆಶುತೋಷ್ ಶಾಸ್ತ್ರಿ ಅವರಿದ್ದ ವಿಭಾಗೀಯ ಪೀಠವು, ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಾಗೂ ಗುಜರಾತ್ ಸರ್ಕಾರ ಆಗಸ್ಟ್ 18ರೊಳಗೆ ಪ್ರತಿಕ್ರಿಯೆ ನೀಡಬೇಕೆಂದು ಸೂಚಿಸಿದೆ.

ಅರ್ಜಿದಾರರಾಗಿರುವ ಜಮೀಯತ್ ಉಲೇಮಾ–ಎ– ಹಿಂದ್ ಸಂಘಟನೆಯು, ಶಾಲಾ ಪಠ್ಯದಲ್ಲಿ ಭಗವದ್ಗೀತೆಯನ್ನು ಸೇರಿಸುವುದು– ಧಾರ್ಮಿಕ ಸೂಚನೆಯನ್ನು ನೀಡುವುದು ಮತ್ತು ಭಾರತೀಯ ಮೌಲ್ಯಗಳು ಹಾಗೂ ಆಲೋಚನೆಗಳನ್ನು ಪ್ರತಿನಿಧಿಸುವ ಹಿಂದೂ ಧಾರ್ಮಿಕ ಪುಸ್ತಕಕ್ಕೆ ಆದ್ಯತೆ ನೀಡಿದಂತಾಗುತ್ತದೆ ಎಂದು ಹೇಳಿದೆ.

ಅರ್ಜಿದಾರರ ಪರ ವಕೀಲ ಮಿಹಿರ್ ಜೋಶಿ, ರಾಜ್ಯ ಶಿಕ್ಷಣ ಇಲಾಖೆಯ ನಿರ್ಣಯವು ರಾಷ್ಟ್ರೀಯ ಶಿಕ್ಷಣ ನೀತಿಗೆ ವಿರುದ್ಧವಾಗಿದೆ ಎಂದು ವಾದಿಸಿ, ಪಠ್ಯಕ್ರಮ ಮತ್ತು ಪಠ್ಯಕ್ರಮವನ್ನು ನಿಗದಿಪಡಿಸುವಾಗ ಆದೇಶವನ್ನು ನೀಡಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆಯೇ ಎಂದೂ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ.

ಶಾಲೆಗಳಲ್ಲಿ ಈ ಪಠ್ಯಕ್ರಮವನ್ನು ಅಳವಡಿಸುವ ನಿರ್ಧಾರವು ಸಂವಿಧಾನದ 25 ಮತ್ತು 28ನೇ ವಿಧಿಯ ಉಲ್ಲಂಘನೆಯಾಗಿದೆ. ಅಷ್ಟೇ ಅಲ್ಲ, ಸರ್ಕಾರದ ಈ ನಿರ್ಣಯವು ಜಾತ್ಯತೀತ ವಿರೋಧಿ ಮತ್ತು ಸಂವಿಧಾನದ ಮೂಲರಚನೆಗೆ ವಿರುದ್ಧವಾಗಿದೆ ಎಂದೂ ಆರೋಪಿಸಿದೆ.

ಸಂವಿಧಾನದ 25ನೇ ವಿಧಿಯು ಸ್ವಾತಂತ್ರ್ಯ, ಮುಕ್ತ ವೃತ್ತಿ, ಮುಕ್ತ ಧಾರ್ಮಿಕ ಸ್ವಾತಂತ್ರ್ಯದ ಆಚರಣೆಯನ್ನು ಖಾತ್ರಿ ಪಡಿಸುತ್ತದೆ. 28ನೇ ವಿಧಿಯು ರಾಜ್ಯ ಸರ್ಕಾರಗಳು ನಡೆಸುವ ಶೈಕ್ಷಣಿಕ ಸಂಸ್ಥೆಗಳಲ್ಲಿ ಯಾವುದೇ ರೀತಿಯ ಧಾರ್ಮಿಕ ಸೂಚನೆಗಳನ್ನು ನೀಡಬಾರದು ಎಂದು ಹೇಳಿದೆ.

ಮಾರ್ಚ್‌ ತಿಂಗಳಲ್ಲಿ ಗುಜರಾತ್ ಸರ್ಕಾರವು 2022-23ರ ಶೈಕ್ಷಣಿಕ ವರ್ಷದಲ್ಲಿ 6 ರಿಂದ 12 ನೇ ತರಗತಿಯವರೆಗೆ ಭಗವದ್ಗೀತೆಯನ್ನು ಶಾಲಾ ಪಠ್ಯಕ್ರಮವಾಗಿ ಬೋಧಿಸುವುದಾಗಿ ಘೋಷಿಸಿತ್ತು. ಈ ನಿರ್ಧಾರವು ರಾಷ್ಟ್ರೀಯ ಶಿಕ್ಷಣ ನೀತಿ 2020ರ ಭಾಗವಾಗಿದೆ ಎಂದೂ ಸರ್ಕಾರ ಹೇಳಿತ್ತು.