ಭಾರದ್ವಾಜ ಮುನಿಯು ಧನುರ್ಗರುವಾರ ದ್ರೋಣಾಚಾರ್ಯರ ತಂದೆ. ದ್ರೋಣಾಚಾರ್ಯರು, ಪಾಂಡವ ಕೌರವ ರಾಜಪುತ್ರರಿಗೆ ಧನು ರ್ವಿದ್ಯೆಯನ್ನು ಕಲಿಸಿದುದು ಮಾತ್ರವಲ್ಲದೆ ಭಾರತ ಯುದ್ಧದಲ್ಲಿ ಕೌರವರ ಪಕ್ಷವಾಗಿ ನಿಂತು, ರಣರಂಗದಲ್ಲಿ ವೀರ ಸ್ವರ್ಗವನ್ನು ಪಡೆದಂಥವರು.ಇಂಥ ದ್ರೋಣಾಚಾರ್ಯರ ತಂದೆಯಾದ ಭಾರದ್ವಜಮುನಿಯ ಹೆಸರಿಗೆ ಈ ಆಸನದ ಅರ್ಪಣೆ.
1. ಮೊದಲು ನೆಲದ ಮೇಲೆ ಕುಳಿತು ಮುಂಗಡಗೆ ಕಾಲುಗಳನ್ನು ನೀಲವಾಗಿ ಚಾಚಿಡಬೇಕು.
2. ಬಳಿಕ ಕಾಲುಗಳನ್ನು ಮಂಡಿಗಳಲ್ಲಿ ಬಾಗಿಸಿ, ಅವನ್ನು ಹಿಂದಕ್ಕೆ ಸರಿಸಿ, ಬಲಪಕ್ಕಕ್ಕೆ ಟೊಂಕಗಳ ಬಳಿ ಬರುವಂತೆ ಮಾಡಬೇಕು.
3. ಆಮೇಲೆ, ಪೃಷ್ಠಗಳನ್ನು ನೆಲದ ಮೇಲೂರಿ ಮುಂಡವನ್ನು ಸುಮಾರು 45 ಡಿಗ್ರಿಗಳಷ್ಟು ಎಡಗಡೆಗೆ ತಿರುಗಿಸಿ, ಬಲ ತೋಳನ್ನು ನೇರವಾಗಿಸಿ, ಎಡ ಮಂಡಿಯ ಬಳಿ ಎಡತೊಡೆಯ ಹೊರಬದಿಯಲ್ಲಿ ಬಲಗೈಯನ್ನಿಟ್ಟು ಆ ಬಳಿಕ ಅದನ್ನು ಎಡಮಂಡಿಯ ಕೆಳಗೆ ಸರಿಸಿ, ಅಂಗೈಯು ನೆಲವನ್ನು ಮುಟ್ಟುವಂತಿರಬೇಕು.
4. ಅನಂತರ,ಉಸಿರನ್ನು ಹೊರಕ್ಕೆ ಬಿಟ್ಟು ಎಡತೋಳನ್ನು ಭುಜದಿಂದ ಬೆನ್ನ ಹಿಂಭಾಗಕ್ಕೆ ತಂದು, ಮೊಣಕೈಯನ್ನು ಬಗ್ಗಿಸಿ, ಎಡಗೈಯಿಂದ ಬಲಗೈ ಮೇಲ್ದೋಳನ್ನು ಅದರ ಮೊಣ ಕೈ ಮೇಲ್ಭಾಗದೆಡೆಗೆ ಹಿಡಿದುಕೊಳ್ಳಬೇಕು.
5. ಈಗ ಕತ್ತನ್ನು ಬಲಗಡೆಗೆ ತಿರುಗಿಸಿ,ಬಲದೋಳಿನತ್ತ ದಿಟ್ಟಿಸಿ ನೋಡಬೇಕು.
6. ಭಂಗಿಯಲ್ಲಿ ಆಳವಾಗಿ ಉಸಿರಾಟ ನಡೆಸುತ್ತ. ಸುಮಾರು ಅರ್ಧ ನಿಮಿಷದ ಕಾಲ ನೆಲೆಸಬೇಕು.
7. ಇದಾದಮೇಲೆ, ಕೈ ಬಿಗಿತವನ್ನು ಸಡಿಲಿಸಿ, ಕಾಲುಗಳನ್ನು ನೀಳವಾಗಿಸಿ, ಇದೇ ಭಂಗಿಯನ್ನು ಇನ್ನೊಂದು ಕಡೆಯಲ್ಲಿಯೂ ಅಭ್ಯಸಿಸ ಬೇಕು. ಇದರಲ್ಲಿ ಎರಡೂ ಕಾಲುಗಳನ್ನು ಎಡಟೊಂಕದ ಪಕ್ಕಕ್ಕೆ ತಂದು ಮುಂಡವನ್ನು ಬಲಪಕ್ಕಕ್ಕೆ 45 ಡಿಗ್ರಿಗಳಷ್ಟು ತಿರುಗಿಸಿ, ಎಡಗೈಯನ್ನು ನೀಳ ಮಾಡಿ,ಎಡದಂಗೈಯನ್ನು ಬಲಮಂಡಿಯ ಕೆಳಕ್ಕೆ ತಂದಿರಿಸಿ,ಬಲತೋಳನ್ನು ಬೆನ್ನ ಹಿಂಬದಿಗೆ ತಂದು, ಎಡ ಮೇಲ್ದೋಳನ್ನು ಮೊಣ ಕೈ ಬಳಿಯಲ್ಲಿ ಹಿಡಿದು, ಈ ಭಂಗಿಯಲ್ಲಿಯೂ ಹಿಂದಿನಷ್ಟು ಕಾಲ ನೆಲೆಸಬೇಕು.
ಪರಿಣಾಮಗಳು
ಈ ಸಾಮಾನ್ಯವಾದ ಆಸನವು ಬೆನ್ನುಮೂಳೆಯ ಕೆಳಭಾಗದ ಮತ್ತು ಟೊಂಕದೆಲುಬಿನ ಪ್ರದೇಶದ ಮೇಲೆ ಬಹುಪರಿಣಾಮವನ್ನುಂಟು ಮಾಡುತ್ತದೆ. ಪೆಡಸು ಬೆನ್ನುಳ್ಳವರಿಗೆ ಮುಂಡವನ್ನು ತಿರುಗುವುದು ಕಷ್ಟವಾಗಿ ತೋರುವುದು. ಈ ಆಸನವು ಅಂಥವರ ಭಿನ್ನುಭಾಗವನ್ನು ಮೃದುಗೊಳಿಸುತ್ತದೆ. ದೇಹದ ಕೀಲುಗಳಲ್ಲಿ ಊತ, ಇಲ್ಲವೇ ವಾತರೋಗದಿಂದ ಪೀಡಿತರಾದವರು ಈ ಆಸನಾ ಭ್ಯಾಸದಿಂದ ಬೇಗ ಗುಣ ಹೊಂದುವರು.