ಮನೆ ರಾಜ್ಯ ಶಿಗ್ಗಾಂವಿಯಲ್ಲಿ ಭರತ್ ಬೊಮ್ಮಾಯಿಗೆ ಸೋಲು: ಇಬ್ಬರು ಬಿಜೆಪಿ ಮುಖಂಡರ ಉಚ್ಛಾಟನೆಗೆ ಆಕ್ರೋಶ

ಶಿಗ್ಗಾಂವಿಯಲ್ಲಿ ಭರತ್ ಬೊಮ್ಮಾಯಿಗೆ ಸೋಲು: ಇಬ್ಬರು ಬಿಜೆಪಿ ಮುಖಂಡರ ಉಚ್ಛಾಟನೆಗೆ ಆಕ್ರೋಶ

0

ಹಾವೇರಿ: ಶಿಗ್ಗಾಂವಿಯಲ್ಲಿ ಭರತ್ ಬೊಮ್ಮಾಯಿ ಸೋಲಿಗೆ ಬಿಜೆಪಿ ಮುಖಂಡರಾದ ಗುತ್ತಿಗೆದಾರ ಶ್ರೀಕಾಂತ ದುಂಡಿಗೌಡ್ರ ಮತ್ತು ಸಂಗಮೇಶ ಕಂಬಾಳಿಮಠ ಕಾರಣ ಎಂದು ಆರೋಪಿಸಿ ಈ ಇಬ್ಬರು ನಾಯಕರನ್ನು ಬಿಜೆಪಿ 6 ವರ್ಷಗಳ ಕಾಲ ಉಚ್ಛಾಟಿಸಿದೆ. ಈ ಕ್ರಮಕ್ಕೆ ಕೆಸಿಸಿ ಬ್ಯಾಂಕ್​ ನಿರ್ದೇಶಕ ಸಂಗಮೇಶ್ ಕಂಬಾಳಿಮಠ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Join Our Whatsapp Group

ಹಾವೇರಿಯಲ್ಲಿ ಗುರುವಾರ ಮಾತನಾಡಿದ ಅವರು, ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಸೋಲಿಗೆ ಸಂಸದ ಬಸವರಾಜ ಬೊಮ್ಮಾಯಿ ಅವರ ಏಕಚಕ್ರಾಧಿಪತ್ಯವೇ ಕಾರಣ. ಉಪಚುನಾವಣೆಯಲ್ಲಿ ಮಾಡಿದ ಭಾಷಣ, ಜನರ ಮನಸ್ಥಿತಿ, ಮತ್ತು ವಕ್ಪ್ ಬೋರ್ಡ್ ಗಲಾಟೆಯ ಪ್ರಕರಣವೇ ಸೋಲಿಗೆ ಕಾರಣಗಳು. ಇದಲ್ಲದೇ ಬೊಮ್ಮಾಯಿ ಅವರು ಮೊದಲು ಬಿಜೆಪಿ ಟಿಕೆಟ್ ಅನ್ನು ಕಾರ್ಯಕರ್ತರಿಗೆ ಕೊಡಿಸುವುದಾಗಿ ಹೇಳಿದ್ದರು. ಬಳಿಕ ಪುತ್ರ ವ್ಯಾಮೋಹದಿಂದ ಟಿಕೆಟ್ ತೆಗೆದುಕೊಂಡು ಬಂದು ಸೋತರು. ಬಿಜೆಪಿ ಕೇವಲ ಒಬ್ಬರಿಗೆ ಸೀಮಿತವೇ? ಎನ್ನುವಂತಾಗಿದೆ. ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರಕ್ಕೆ ಬೊಮ್ಮಾಯಿ ಕೊಡುಗೆಯೇನು ಅನ್ನೋದಕ್ಕೆ ಜನ ಇದೀಗ ಪಾಠ ಕಲಿಸಿದ್ದಾರೆ. ನಮ್ಮನ್ನು 6 ವರ್ಷ ಹೊರಗಿಟ್ಟರೆ ಮತ್ತೆ ಟಿಕೆಟ್ ಕೇಳಲ್ಲ ಎಂಬ ಕಾರಣದಿಂದ ಈ ಉಚ್ಛಾಟನೆ ಮಾಡಿದ್ದಾರೆ. ಈ ಕುರಿತಂತೆ ದೆಹಲಿ ಮತ್ತು ರಾಜ್ಯ ನಾಯಕರನ್ನು ನಿಯೋಗದ ಮೂಲಕ ಭೇಟಿ ಮಾಡಿ ದೂರು ಸಲ್ಲಿಸುತ್ತೇವೆ ಎಂದು ಹೇಳಿದರು.

ಈ ಬೆನ್ನಲ್ಲೇ ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಭಾಸ ಚೌಹಾಣ್ ಅವರು ಪಕ್ಷದ ಮುಖಂಡರೊಂದಿಗೆ ಸುದ್ದಿಗೋಷ್ಠಿ ನಡೆಸಿ ಸಂಗಮೇಶ್ ಕಂಬಾಳಿಮಠ​ ವಿರುದ್ಧ ಹರಿಹಾಯ್ದರು.

ಬಸವರಾಜ ಬೊಮ್ಮಾಯಿ ಅವರಿಗೆ ತಮ್ಮ ಪುತ್ರ ಭರತ ಬೊಮ್ಮಾಯಿ ಅವರನ್ನು ಸ್ಪರ್ಧೆಗಿಳಿಸುವ ಇಚ್ಛೆ ಇರಲಿಲ್ಲ. ಈ ಮೊದಲು ಒಂದು ಬಾರಿ ಶಾಸಕ ಸ್ಥಾನಕ್ಕೆ, ಮತ್ತೊಮ್ಮೆ ಸಂಸದ ಸ್ಥಾನಕ್ಕೆ ಚುನಾವಣೆ ಎದುರಿಸಿ ದೈಹಿಕವಾಗಿ ದಣಿದಿದ್ದರು. ಅಲ್ಲದೇ ಮೂರನೇ ಚುನಾವಣೆಯಲ್ಲಿ ತಮ್ಮ ಮಗನನ್ನು ಕಣಕ್ಕಿಳಿಸಿ ಆಖಾಡ ಪ್ರವೇಶಿಸುವ ಆಸೆ ಅವರಿಗಿರಲಿಲ್ಲ. ಆದರೆ, ಹೈಕಮಾಂಡ್ ಒತ್ತಾಯಿಸಿದ್ದರಿಂದ ತಮ್ಮ ಮಗನ ಪರವಾಗಿ ಪ್ರಚಾರ ಮಾಡಿದರು. ಆದರೆ, ಕಾಂಗ್ರೆಸ್ ಸರ್ಕಾರ ಹಣ ಬಲದಿಂದ, ಸರ್ಕಾರ ಇರುವ ಕಾರಣ ಗೆಲುವು ಸಾಧಿಸಿದೆ. 2028ರಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಭರತ್ ಬೊಮ್ಮಾಯಿ ಮತ್ತೆ ಚುನಾವಣೆಗೆ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಲಿದ್ದಾರೆ ಎಂದು ಸುಭಾಸ ಚೌಹಾಣ್ ತಿಳಿಸಿದರು.