ಮಂಡ್ಯ (Mandya): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೊ ಯಾತ್ರೆಯು ಎರಡು ದಿನಗಳ ಬಿಡುವಿನ ನಂತರ ಆರಂಭಗೊಂಡಿದ್ದು, ಇಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಕೂಡ ಪಾಲ್ಗೊಂಡಿದ್ದಾರೆ.
ಮಂಡ್ಯದ ಪಾಂಡವಪುರ ಬೆಳ್ಳಾಲೆ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಪಾದಯಾತ್ರೆ ಆರಂಭಿಸಲಾಗಿದೆ.
ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿ ಜೊತೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರು ಕೆಲ ಹೊತ್ತು ಹೆಜ್ಜೆ ಹಾಕುವ ಮೂಲಕ ಯಾತ್ರೆಗೆ ಮತ್ತಷ್ಟು ಬಲತಂದಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಹರಿಪ್ರಸಾದ್ ಸೇರಿದಂತೆ ಹಲವಾರು ಕಾರ್ಯಕರ್ತರು ಭಾಗಿಯಾಗಿದ್ದರು.
ಪಾದಯಾತ್ರೆಯೂ ಖಾರಾದ್ಯ ಕೆರೆ ಬಳಿ ತಲುಪಿದ ನಂತರ ವಿಶ್ರಾಂತಿ ಪಡೆಯಲಿದ್ದಾರೆ. ತದನಂತರ ಸಂಜೆ 4:00ಗೆ ಖಾರಾದ್ಯ ಕೆರೆಯಿಂದ ಆರಂಭವಾಗುವ ಪಾದಯಾತ್ರೆ, ಸಂಜೆ 7:00ವರೆಗೆ ನಡೆದು ಮಂಡ್ಯದ ಬ್ರಹ್ಮದೇವರಹಳ್ಳಿ ಗ್ರಾಮವನ್ನು ತಲುಪಲಿದೆ.
ಅಕ್ಟೋಬರ್ 3ರಂದು ಮೈಸೂರಿಗೆ ಬಂದಿರುವ ಸೋನಿಯಾ ಗಾಂಧಿ ಅವರು ಕಬಿನಿ ಹಿನ್ನೀರಿನ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ರು. ಇಂದು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದಾರೆ. ನಾಳೆ (ಶುಕ್ರವಾರ) ನಾಗಮಂಗಲದಲ್ಲಿ ಭಾರತ್ ಜೋಡೋ ಪಾದಯಾತ್ರೆಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಭಾಗವಹಿಸುವ ಸಾಧ್ಯತೆ ಇದೆ.