ಮನೆ ರಾಜಕೀಯ ‘ಭಾರತ್ ಜೋಡೋ’ ಪಾದಯಾತ್ರೆ: ಸಿದ್ದರಾಮಯ್ಯ ನೇತೃತ್ವದಲ್ಲಿ ಪೂರ್ವ ಸಿದ್ದತಾ ಸಭೆ

‘ಭಾರತ್ ಜೋಡೋ’ ಪಾದಯಾತ್ರೆ: ಸಿದ್ದರಾಮಯ್ಯ ನೇತೃತ್ವದಲ್ಲಿ ಪೂರ್ವ ಸಿದ್ದತಾ ಸಭೆ

0

ಮೈಸೂರು(Mysuru): ರಾಹುಲ್ ಗಾಂಧಿ ನೇತೃತ್ವದಲ್ಲಿ ಹಮ್ಮಿಕೊಂಡಿರುವ ‘ಭಾರತ್ ಜೋಡೋ’ ಪಾದಯಾತ್ರೆಗೆ ಪೂರ್ವ ಸಿದ್ಧತೆ ಕೈಗೊಳ್ಳುವ ಸಂಬಂಧ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ ಮುಖಂಡರೊಂದಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸಭೆ ನಡೆಸಿದರು.

ನಗರ ಹೋಟೆಲ್‌ವೊಂದರಲ್ಲಿ ಸೋಮವಾರ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಕ್ಷದಿಂದ ಹಮ್ಮಿಕೊಂಡಿರುವ ‘ಭಾರತ್ ಜೋಡೋ’ ಪಾದಯಾತ್ರೆಯಲ್ಲಿ ಪ್ರತಿ ದಿನ 25ಸಾವಿರ ಕಾರ್ಯಕರ್ತರು ರಾಹುಲ್ ಗಾಂಧಿ ಅವರೊಂದಿಗೆ ಭಾಗವಹಿಸಬೇಕು. ಆ ನಿಟ್ಟಿನಲ್ಲಿ ಮುಖಂಡರೆಲ್ಲರೂ ಜವಾಬ್ದಾರಿ ಹೊರಬೇಕು ಎಂದು ಸೂಚಿಸಿದರು.

ಪಾದಯಾತ್ರೆಯು ಸೆ.30ಕ್ಕೆ ಕೇರಳ ಮುಗಿಸಿ ಗುಂಡ್ಲುಪೇಟೆಯಿಂದ ರಾಜ್ಯವನ್ನು ಪ್ರವೇಶಿಸಲಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ 3,500 ಕಿಲೋ ಮೀಟರ್‌ವರೆಗೆ ಭಾರತದ ಏಕತೆ ಹಾಗೂ ಭಾವೈಕ್ಯ ಬೆಸೆಯುವ ಉದ್ದೇಶದ ಐತಿಹಾಸಿಕ ಪಾದಯಾತ್ರೆ ಇದು. ಕರ್ನಾಟಕದ ಎಂಟು ಜಿಲ್ಲೆಗಳಲ್ಲಿ 21 ದಿನಗಳವರೆಗೆ ಸಂಚರಿಸಲಿದ್ದು, ದಿನಕ್ಕೆ 25 ಕಿ.ಮೀ. ಪಾದಯಾತ್ರೆ ಇರುತ್ತದೆ ಎಂದು ಹೇಳಿದರು.

ಸಾರ್ವಜನಿಕರು, ರೈತರು, ಮಹಿಳೆಯರು, ಯುವಕರೊಂದಿಗೆ ರಾಹುಲ್ ಗಾಂಧಿ ಸಂವಾದ ನಡೆಸಲಿದ್ದಾರೆ. ವಿವಿಧ ವರ್ಗದವರ ಸಮಸ್ಯೆಗಳು, ದೇಶದ ಅರ್ಥ ವ್ಯವಸ್ಥೆ ಹಾಗೂ ಬೆಲೆ ಏರಿಕೆ ವಿಚಾರಗಳ ಬಗ್ಗೆ ಜನಸಾಮಾನ್ಯರೊಂದಿಗೆ ಚರ್ಚಿಸಲಿದ್ದಾರೆ ಎಂದರು.

ಯಾವುದೇ ರಾಜಕೀಯ ಪಕ್ಷಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇರಬೇಕು. ಮತ್ತೊಂದರ ವಿನಾಶಕ್ಕೆ ಮುಂದಾಗಬಾರದು. ಬೇರೆ ಪಕ್ಷಗಳು ಈ ವ್ಯವಸ್ಥೆಯಲ್ಲಿರಬೇಕು ಎಂಬ ಮನೋಭಾವ ಹೊಂದಿರಬೇಕು. ಆದರೆ, ಬಿಜೆಪಿ ಅದಕ್ಕೆ ತದ್ವಿರುದ್ಧವಾಗಿದೆ ಎಂದು ದೂರಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ, ಎಐಸಿಸಿ ಕಾರ್ಯದರ್ಶಿ ಆರ್.ಜಾನ್‌ ಮಾತನಾಡಿದರು.

ಶಾಸಕರಾದ ತನ್ವೀರ್ ಸೇಠ್, ಎಚ್‌.ಪಿ.ಮಂಜುನಾಥ್, ಡಾ.ಯತೀಂದ್ರ ಸಿದ್ದರಾಮಯ್ಯ, ಸಿ.ಪುಟ್ಟರಂಗಶೆಟ್ಟಿ, ಆರ್.ನರೇಂದ್ರ, ಅನಿಲ್ ಚಿಕ್ಕಮಾದು, ಡಾ.ಡಿ.ತಿಮ್ಮಯ್ಯ, ಮಧು ಜಿ. ಮಾದೇಗೌಡ, ಮೈಸೂರು ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮೂರ್ತಿ, ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್, ಚಾಮರಾಜನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮರಿಸ್ವಾಮಿ, ಮುಖಂಡರಾದ ವಾಸು, ಎಂ.ಕೆ.ಸೋಮಶೇಖರ್, ಬಾಲರಾಜ್‌, ಕಳಲೆ ಕೇಶವಮೂರ್ತಿ, ಬನ್ನೂರು ಕೃಷ್ಣಪ್ಪ, ಕೆ.ಸಿ. ಪುಟ್ಟಸಿದ್ದಶೆಟ್ಟಿ, ಜಯಣ್ಣ, ಎ.ಆರ್.ಕೃಷ್ಣಮೂರ್ತಿ, ಕೆ.ವೆಂಕಟೇಶ್, ಕಾಗಲವಾಡಿ ಶಿವಣ್ಣ, ಎ.ಸಿದ್ದರಾಜು, ಗಣೇಶ್ ಪ್ರಸಾದ್, ರವಿಶಂಕರ್, ಸುನಿಲ್ ಭೋಸ್, ಡಾ.ರವೀಂದ್ರ, ಎಂ.ಲಕ್ಷ್ಮಣ್, ಎಚ್‌.ಸಿ.ಬಸವರಾಜ್, ಕೆ.ಮರಿಗೌಡ, ಹರೀಶ್ ಗೌಡ, ಮಂಜುಳಾ ರಾಜ್ ಇದ್ದರು.