ಬಳ್ಳಾರಿ : ಜನಾರ್ದನ ರೆಡ್ಡಿ ಅವರ ಮನೆ ಮುಂದೆ ನಡೆದ ಗಲಾಟೆಗೆ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ಹಾಗೂ ಸತೀಶ್ ರೆಡ್ಡಿ ಕಾರಣ. ಇಬ್ಬರನ್ನು ಕೂಡಲೇ ಬಂಧಿಸಬೇಕು ಎಂದು ಮಾಜಿ ಸಚಿವ ಶ್ರೀರಾಮುಲು ಆಗ್ರಹಿಸಿದ್ದಾರೆ.
ಜಿಲ್ಲೆಯಲ್ಲಿ ಮಾತನಾಡಿದ ಅವರು, ತಮ್ಮ ಗನ್ ಮ್ಯಾನ್‌ಗೆ ಹೇಳಿ ಭರತ್ ರೆಡ್ಡಿ ಗುಂಡು ಹಾರಿಸಿದ್ದಾರೆ. ಭರತ್ ರೆಡ್ಡಿ ಸಾಕಷ್ಟು ಪ್ರಚೋದನಕಾರಿ ಹೇಳಿಕೆ ಕೊಟ್ಟಿದ್ದಾನೆ. ಬಳ್ಳಾರಿ ಸುಟ್ಟು ಹಾಕುತ್ತೇನೆ ಎಂದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ.
ಇನ್ನೂ ಪ್ರಕರಣದ ಮೂಲ ಆರೋಪಿ ಸತೀಶ್ ರೆಡ್ಡಿ ಎಲ್ಲಿದ್ದಾರೆ? ಅವರನ್ನು ಬೆಂಗಳೂರಿನಲ್ಲಿಟ್ಟಿದ್ದಾರೆ. ಎಲ್ಲಾ ವ್ಯವಸ್ಥೆ ಮಾಡಿ, ರಾಜ್ಯಾತಿಥ್ಯ ಕೊಟ್ಟಿದ್ದಾರೆ. ಶಾಸಕ ಭರತ್ ರೆಡ್ಡಿಯನ್ನು ಅರೆಸ್ಟ್ ಮಾಡಿದರೆ, ನಮ್ಮ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತೆ ಎಂದು ಅರೆಸ್ಟ್ ಮಾಡಿಲ್ಲ ಎಂದು ಕಿಡಿಕಾರಿದ್ದಾರೆ.
ಯಾರಾದ್ರೂ ಬರ್ತಡೇ ಟೈಮ್‌ನಲ್ಲಿ ಮಚ್ಚು, ಲಾಂಗು ಹಿಡಿದು ರೀಲ್ಸ್ ಮಾಡಿದ್ರೆ ಅವರನ್ನು ಬಂಧಿಸ್ತಾರೆ. ಬಿಜೆಪಿ ಕಾರ್ಯಕರ್ತರನ್ನೂ ಬಂಧಿಸ್ತಾರೆ. ಗೃಹ ಮಂತ್ರಿಗಳ ವಿರುದ್ಧ ಪ್ರತಿಭಟಿಸಿದ್ರೆ ಅಟ್ರಾಸಿಟಿ ಹಾಕ್ತಾರೆ. ಗಲಾಟೆ ಮಾಡಿದ್ದು ಶಾಸಕ ಭರತ್ ರೆಡ್ಡಿ ಹಾಗೂ ಸತೀಶ್ ರೆಡ್ಡಿ. ಕೂಡಲೇ ಶಾಸಕ ಭರತ್ ರೆಡ್ಡಿ, ಅವರ ಹಿಂಬಾಲಕರು ಹಾಗೂ ಎಲ್ಲಾ ಗನ್‌ಮ್ಯಾನ್‌ಗಳನ್ನ ಬಂಧಿಸಬೇಕು.
ಈಗಾಗಲೇ ಕೆಲವರನ್ನು ವಿಚಾರಣೆಗೆ ಕರೆಯಲು ನಮ್ಮ ಕಾರ್ಯಕರ್ತರನ್ನ ಆಯ್ಕೆ ಮಾಡಿ, ಲಿಸ್ಟ್ ಮಾಡಿದ್ದಾರೆ. ತಹಸೀಲ್ದಾರ್ ಮೂಲಕ 33 ಜನರಿಗೆ 107 ನೋಟಿಸ್ ಕೊಟ್ಟಿದ್ದಾರೆ. ಆದರೆ ಗಲಾಟೆ ಮಾಡಿದವರನ್ನ ಬಂಧಿಸದೇ ಸುಮ್ನಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.















