ಮನೆ ಯೋಗಾಸನ ಭಸ್ತ್ರಿಕಾ ಪ್ರಾಣಾಯಾಮ

ಭಸ್ತ್ರಿಕಾ ಪ್ರಾಣಾಯಾಮ

0

‘ಭಸ್ತ್ರಿಕಾ’ ಎಂದರೆ, ಕುಲುಮೆಯನ್ನೂದುವುದಕ್ಕೆ ಬೇಕಾದ ತಿದಿ ಕಮ್ಮಾರನ ಕುಲುಮೆ ಯಲ್ಲಿರುವಂತೆ ಗಾಳಿಯನ್ನು ತಿದಿಗಳಲ್ಲಿ ತುಂಬಿಸಿ ಅದನ್ನು ವೇಗದಿಂದ ಕುಲುಮೆಯೊಳಕ್ಕೆ ನುಗ್ಗಿಸುವಂತೆ, ಈ ಪ್ರಾಣಾಯಾಮವನ್ನು ಮಾಡಬೇಕಾಗಿರುವುದರಿಂದ ಇದಕ್ಕೆ ಈ ಹೆಸರು. ಇದರೆ ಅಭ್ಯಾಸ ಕ್ರಮವನ್ನು ಎರಡು ಹಂತಗಳಲ್ಲಿ ವಿವರಿಸಿದೆ.

ಅಭ್ಯಾಸ ಕ್ರಮ

ಹಂತ 1

೧. ಮೊದಲು ‘ಉಜ್ಜಾಯಿ’ ಪ್ರಾಣಾಯಾಮದಲ್ಲಿಯ ಅಭ್ಯಾಸ ಕ್ರಮದಲ್ಲಿ 1 ಮತ್ತು 2ನೇ ಪರಿಚ್ಛೇದಗಳಲ್ಲಿ ವಿವರಿಸಿರುವಂತೆ ಅಭ್ಯಸಿಸಬೇಕು.

೨. ಬಳಿಕ ಉಸಿರನ್ನು ಬಲವಾಗಿಯೂ ಮತ್ತು ವೇಗವಾಗಿಯೂ ಮೂಗಿನ ಹೊಳ್ಳೆಗಳ ಮೂಲಕ ಒಳಕ್ಕೆಳೆದು, ಅದನ್ನು ಮತ್ತೆ ವೇಗದಿಂದ ಬಲಗೂಡಿಸಿ ಹೊರಕ್ಕೆ ದೂಡಬೇಕು. ಹೀಗೆ ಒಂದು ಸಲ ಉಸಿರನ್ನು ಒಳಕ್ಕೆಳೆದು, ಒಂದು ಸಲ ಹೊರಕ್ಕೆ ಬಿಟ್ಟರೆ, ಈ ಪ್ರಾಣಾಯಾಮ ಚಕ್ರದ ಒಂದು ಸುತ್ತಾದಂತೆ. ಹೀಗೆ ಮಾಡುವಾಗ ಒಳಕ್ಕೆ ನುಗ್ಗುವ ಮತ್ತು ವೇಗದಿಂದ ಹೊರಬರುವ ಉಸಿರು ತಿದಿಗಳಲ್ಲಾಗುವ ಶಬ್ದದಂತೆ ಶಬ್ದ ಮಾಡುತ್ತದೆ.

೩. ಈ ಪ್ರಾಣಾಯಾಮ ಚಕ್ರದ 10-12 ಸುತ್ತುಗಳನ್ನು ಎಡೆಬಿಡದೆ ಮಾಡಬೇಕು. ಆ ಬಳಿಕ ‘ಉಜ್ಜಾಯೀ’ ಪ್ರಾಣಾಯಾಮದಲ್ಲಿರುವಂತೆ ಒಂದು ಸಲ ಆಳವಾಗಿ ಉಸಿರನ್ನು ಒಳಕ್ಕೆಳೆಯ ಬೇಕು. ಆನಂತರ ಈ ಉಸಿರನ್ನು 2-3 ಸೆಕೆಂಡುಗಳ ಕಾಲ ‘ಮೂಲಬಂಧ’ ದಲ್ಲಿದ್ದು ಒಳಗೇ ನಿಲ್ಲಿಸಿ (ಅಂತರ ಕುಂಭಕವನ್ನು ಮಾಡಿ). ಆ ಬಳಿಕ ‘ಉಜ್ಜಾಯೀ’ ಪ್ರಾಣಾಯಾಮದಲ್ಲಿ ಮಾಡಿದಂತೆ ಉಸಿರನ್ನು ನಿಧಾನವಾಗಿಯೂ ಆಳವಾಗಿಯೂ ಹೊರಕ್ಕೆ ಬಿಡಬೇಕು.

೪. ಈ ಬಗೆಯಲ್ಲಿ ‘ಉಜ್ಜಾಯೀ ಪ್ರಾಣಾಯಾಮ’ದಂತೆ ಉಸಿರಾಟ ನಡೆಸುವುದರಿಂದ ವಪೆಗೂ ಮತ್ತು ಶ್ವಾಸಕೋಶಗಳಿಗೂ ವಿಶ್ರಾಂತಿ ದೊರೆತು, ಮತ್ತೆ ‘ಭಸ್ತಿಕಾ ಪ್ರಾಣಾಯಾಮ’ವನ್ನು ಕೈಗೊಳ್ಳುವುದಕ್ಕೆ ಅವನ್ನು ಸಿದ್ಧಗೊಳಿಸುತ್ತದೆ.

೫. ಹೀಗೆ ನಡು ನಡುವೆ ‘ಉಜ್ಜಾಯಿ’ ಉಸಿರಾಟ ಕ್ರಮವನ್ನು ಅನುಸರಿಸುತ್ತ ‘ಭಸ್ತ್ರಿಕಾ ಪ್ರಾಣಾಯಾಮ’ವನ್ನು ಮೂರು ನಾಲ್ಕು ಸಲ ಅಭ್ಯಸಿಸಬೇಕು.

೬.ಈಪ್ರಾಣಾಯಾಮಾಭ್ಯಾಸದಲ್ಲಿ ಉಸಿರಾಟದಿಂದಾಗುವ ಶಬ್ದ ಮತ್ತು ಅದರ ವೇಗವು ತಗ್ಗಿದುದೇ ಆದರೆ, ಅವುಗಳ ಆವೃತ್ತಿಗಳನ್ನು (ಸುತ್ತು) ಕಡಿಮೆ ಮಾಡಬೇಕು.

೭. ಈ ಪ್ರಾಣಾಯಾಮವನ್ನು ಮಾಡಿ ಮುಗಿಸಿದ ಮೇಲೆ ‘ಶವಾಸನ’ದಲ್ಲಿ ನೆಲದ ಮೇಲೊರಗಿ ವಿಶ್ರಮಿಸಿಕೊಳ್ಳಬೇಕು.

ಹಂತ 2

೧ ಮೊದಲು ‘ಉಜ್ಜಾಯೀ ಪ್ರಾಣಾಯಾಮ’ದ ಅಭ್ಯಾಸದಲ್ಲಿಯ 1 ಮತ್ತು 2ನೇ ಪರಿಚ್ಛೇದಗಳಲ್ಲಿಯ ವಿವರಣೆಯಂತೆ ಅಭ್ಯಾಸ ಮಾಡಬೇಕು.

೨. ಬಳಿಕ ‘ಸೂರ್ಯಭೇದನ ಪ್ರಾಣಾಯಾಮ’ದಲ್ಲಿ ವಿವರಿಸಿರುವಂತೆ ಹೆಬ್ಬೆರಳು ಮತ್ತು ಉಂಗುರ ಕಿರುಬೆರಳುಗಳ ಸ್ಥಾನಗಳನ್ನು ಬಲ – ಎಡ ಮೂಗಿನ ಹೊಳ್ಳೆಗಳ ಮೇಲೆ ಕ್ರಮವಾಗಿ ಇಡಬೇಕು.

೩. ಅನಂತರ ಮೂಗಿನ ಎಡಹೊಳ್ಳೆಯನ್ನು ಪೂರ್ಣವಾಗಿ ಬೆರಳುಗಳ ಒತ್ತಡದಿಂದ ಮುಚ್ಚಿ ಬಲಹೊಳ್ಳೆಯನ್ನು ಅರ್ಧ ತೆರೆದಿಡಬೇಕು.

೪ ಇದಾದ ಬಳಿಕ, ಮೂಗಿನ ಬಲಹೊಳ್ಳೆಯ ಮೂಲಕವೇ ಉಸಿರನ್ನು ಬಲವಾಗಿ ವೇಗವಾಗಿ ಒಳಕ್ಕೆಳೆದು, ಮೇಲೆ ವಿವರಿಸಿದ ಈ ಪ್ರಾಣಾಯಾಮದ ಹಂತ 1ನೇ ಅಭ್ಯಾಸ ಕ್ರಮದಲ್ಲಿ ನಡೆಸಿದಂತೆ 10-12 ಸಲ ಆವರ್ತಿಸಬೇಕು.

೫. ಈಗ ಬಲಹೊಳ್ಳೆಯನ್ನು ಕೈ ಹೆಬ್ಬೆರಳಿನ ಒತ್ತಡದಿಂದ ಮುಚ್ಚಿ, ಎಡ ಹೊಳ್ಳೆಯನ್ನು ಸ್ವಲ್ಪಮಟ್ಟಿಗೆ ತೆರೆದು ಭಸ್ತ್ರಿಕಾ ಪ್ರಾಣಾಯಾಮ’ದ ರೇಚಕದ ಕ್ರಮವನ್ನೂ ಕೂಡ ಅಷ್ಟೇ ಸಲ ಆವರ್ತಿಸಬೇಕು

೬. ಆ ಬಳಿಕ, ಮೂಗಿನ ಹೊಳ್ಳೆಗಳ ಮೇಲಿನ ಬೆರಳುಗಳನ್ನೆತ್ತಬೇಕು.

೭. ಆಮೇಲೆ ‘ಉಜ್ಜಾಯಿ’ ಯಲ್ಲಿದ್ದಂತೆ ಕೆಲವು ಸಲ ಆಳವಾಗಿ ಉಸಿರಾಟ ನಡೆಸಬೇಕು.

೮. ಈ ಕ್ರಮದಲ್ಲಿ ನಡುನಡುವೆ ‘ಉಜ್ಜಾಯಿಗಳನ್ನು ಆಚರಿಸುತ್ತ, ಎರಡು ಕಡೆಯ ಮೂಗಿನ ಹೊಳೆಗಳಲ್ಲಿ ಈ ‘ಭಸ್ತ್ರಿಕಾ ಪ್ರಾಣಾಯಾಮ್ಲ ಚಕ್ರ’ವನ್ನು ಮೂರು ನಾಲ್ಕು ಸಲ ಆವರ್ತಿಸಬೇಕು.

೯. ಈ ಅಭ್ಯಾಸವನ್ನು ಕ್ರಮವಾಗಿ ಮಾಡಿ ಮುಗಿಸಿದ ಮೇಲೆ, ನೆಲದ ಮೇಲೆ ‘ಶವಾಸನ’ದಲ್ಲಿ ದೇಹವನ್ನು ಒರಗಿಸಬೇಕು.