ಮುಂಬೈ(Mumbai): ಭೀಮಾ ಕೋರೆಗಾಂವ್ ಪ್ರಕರಣದ ತನಿಖೆಗಾಗಿ ರಾಜ್ಯ ಸರ್ಕಾರ ರಚಿಸಿರುವ ಆಯೋಗವು ರಾಜ್ಯದ ಪ್ರಮುಖ ಪಕ್ಷಗಳ ಮುಖಂಡರಿಗೆ ಸಮನ್ಸ್ ಜಾರಿ ಮಾಡಿದ್ದು, ಭೀಮಾ ಕೋರೆಗಾಂವ್ ಪ್ರಕರಣದ ಕುರಿತು ತಮ್ಮ ಅಭಿಪ್ರಾಯವನ್ನು ಜೂನ್ 30 ರೊಳಗೆ ತಿಳಿಸುವಂತೆ ಸೂಚಿಸಿದೆ.
ಆಯೋಗವು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ, ಎಂಎನ್ಎಸ್ ಅಧ್ಯಕ್ಷ ರಾಜ್ ಠಾಕ್ರೆ, ಕಾಂಗ್ರೆಸ್ ರಾಜ್ಯಾಧ್ಯಕ್ಷ, ವಂಚಿತ ಬಹುಜನ ಒಕ್ಕೂಟದ ಮುಖ್ಯಸ್ಥ ಪ್ರಕಾಶ್ ಅಂಬೇಡ್ಕರ್ ಮತ್ತು ರಿಪಬ್ಲಿಕನ್ ಅಠವಳೆ ಬಣದ ರಾಮದಾಸ್ ಅಠವಳೆ ಅವರಿಗೆ ಸಮನ್ಸ್ ನೀಡಿದೆ ಎಂದು ತಿಳಿದುಬಂದಿದೆ.
ಜೂನ್ 30 ರೊಳಗೆ ಪಕ್ಷವು ಪ್ರಕರಣದಲ್ಲಿ ತನ್ನ ಪಾತ್ರದ ಬಗ್ಗೆ ಹೇಳಿಕೆಯನ್ನು ಸಲ್ಲಿಸಬೇಕು. ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ರಾಜ್ಯದ ಪ್ರಮುಖ ಪಕ್ಷಗಳ ನಾಯಕರು ಏನು ಹೇಳುತ್ತಾರೆಂದು ತಿಳಿಯಲು ಸಮನ್ಸ್ ಜಾರಿ ಮಾಡಲಾಗಿದೆ.
ಮತ್ತೊಂದೆಡೆ, ಭೀಮಾ ಕೋರೆಗಾಂವ್ ಹಿಂಸಾಚಾರ ಮತ್ತು ಎಲ್ಗಾರ್ ಪರಿಷತ್ ಪ್ರಕರಣದಲ್ಲಿ ಬಂಧಿತರಾಗಿರುವ ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹನಿ ಬಾಬು (55) ಅವರ ಜಾಮೀನು ಅರ್ಜಿಯನ್ನು ವಿಚಾರಣೆ ಮಾಡಲು ಹೈಕೋರ್ಟ್ ನಿರಾಕರಣೆ ಮಾಡಿದೆ. ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ- ದೇರೆ ಮತ್ತು ವಿ.ಜಿ.ಬಿಶ್ತ್ ಈ ಪ್ರಕರಣದ ವಿಚಾರಣೆಗೆ ನಿರಾಕರಿಸಿರುವ ಹಿನ್ನೆಲೆ ಇದೀಗ ಈ ಪ್ರಕರಣ ಮತ್ತೊಂದು ಪೀಠದ ಎದುರು ಶೀಘ್ರದಲ್ಲೇ ವಿಚಾರಣೆಗೆ ಬರುವ ಸಾಧ್ಯತೆಯಿದೆ.