ಭೇಕವೆಂದರೆ ಕಪ್ಪೆ.ಈ ಆಸನದ ಚಲನವಲನಗಳು ಕಪ್ಪೆಯನ್ನು ಹೋಲುವುದರಿಂದ ಇದಕ್ಕೆ ಈ ಹೆಸರು.
ಅಭ್ಯಾಸ ಕ್ರಮ
1. ಮೊದಲು ಕೆಳಮೊಗಮಾಡಿ ಹೊಟ್ಟೆಯನ್ನು ನೆಲದ ಮೇಲೊರಗಿಸಿ, ಉದ್ದಕ್ಕೂ ಮಲಗಿ,ತೋಳುಗಳನ್ನು ಹಿಂಬಾಗಕ್ಕೆ ನೀಡಬೇಕು.
2. ಬಳಿಕ ಉಸಿರನ್ನು ಹೊರಕ್ಕೆ ಬಿಟ್ಟು ಮಂಡಿಗಳನ್ನು ಬಾಗಿಸಿ, ಹಿಮ್ಮಡಿಗಳನ್ನು ಟೊಂಕಗಳಿರುವ ದಿಕ್ಕಿಗೆ ಸರಿಸಬೇಕು. ಆನಂತರ ಬಲ ದಂಗಾಲನ್ನು ಬಲಗೈಯಿಂದಲೂ, ಎಡದಂಗಾಲನ್ನು ಎಡಗೈಯಿಂದಲೂ, ಗಟ್ಟಿಯಾಗಿ ಹಿಡಿದು ಎರಡು ಸಲ ಉಸಿರಾಟ ಮುಗಿಸಿ, ಬಳಿಕ ಉಸಿರನ್ನು ಹೊರಕ್ಕೆ ಬಿಟ್ಟು, ತಲೆಯನ್ನೂ ಮುಂಡದ ಮೇಲ್ಭಾಗವನ್ನೂ ಮೇಲೆತ್ತಿ ಮೇಲ್ದಿಕ್ಕಿಗೆ ನಿಟ್ಟಿಸಬೇಕು.
3. ಈಗ ಕೈಗಳನ್ನು ಹೊರಳಿಸಿ, ಅಂಗೈಯನ್ನು ತಲೆಯ ದಿಕ್ಕಿಗೆ ನೀಡಿದ ಕಾಲ್ಬೆರಳುಗಳ ಕೊನೆಗಳ ಮೇಲಿರಿಸಬೇಕು.ಆಮೇಲೆ ಕೈಗಳನ್ನು ಕೆಳಕೆಳಕ್ಕೆ ಒತ್ತುತ್ತ ಕಾಲ್ಬೆರಳುಗಳನ್ನೂ ಹಿಮ್ಮಡಿಗಳನ್ನೂ ನೆಲದ ಸಮೀಪಕ್ಕೆ ಬರುವಂತೆ ಮಾಡಿ,ಮಣಿಕಟ್ಟಿಗೂ ಮತ್ತು ಮೊಣಕೈಗೂ ಮಧ್ಯ ಇರುವ ತೋಳಿನ ಅಂದರೆ ಕೆಳತೋಳಿನ ಭಾಗವನ್ನು ನೆಲಕ್ಕೆ ಲಂಬವಾಗಿರುವಂತೆ ನಿಲ್ಲಿಸಬೇಕು. ಮಂಡಿಗಳೂ ಮತ್ತು ಹರಡುಗಳೂ ಸುಲಭವಾಗಿ ಆಡುವುದಾದರೆ ಹಿಮ್ಮಡಿಗಳನ್ನು ನೆಲಕ್ಕೆ ಮುಟ್ಟಿಸುವಂತೆ ಮಾಡುವುದು ಸಾಧ್ಯ.
4. ಸುಮಾರು 15 – 30 ಸೆಕೆಂಡುಗಳ ಕಾಲ ಉಸಿರನ್ನು ಬಿಗಿ ಹಿಡಿಯದೆ ಈ ಭಂಗಿಯಲ್ಲಿ ನೆಲೆಸಬೇಕು.ಕೊನೆಗೆ ಉಸಿರನ್ನು ಹೊರಕ್ಕೆ ಬಿಟ್ಟು ಕಾಲುಗಳನ್ನು ನೀಳವಾಗಿ ಚಾಚಿ ವಿಶ್ರಮಿಸಿಕೊಳ್ಳಬೇಕು.
ಪರಿಣಾಮಗಳು
ಕಿಬ್ಬೋಟ್ಟೆಯ ಭಾಗಗಳು ನೆಲದಮೇಲೆ ಒತ್ತಿಟ್ಟಿರುವುದರಿಂದ, ಅದರೂಳಗಿನ ಅಂಗಗಳಿಗೆ ಇದರಿಂದ ತುಂಬಾ ಪ್ರಯೋಜನ ವುಂಟು ಈ ಆಸನದಿಂದ ಮಂಡಿಗಳು ಬಲಗೊಂಡು, ಸಂಧಿವಾತದಿಂದುಂಟಾಗುವ ಮಂಡಿಗಳ ಕೀಳುಗಳಲ್ಲಿರುವ ನೋವನ್ನು ಕಳೆಯಬಹುದು. ಅಲ್ಲದೆ ಮಂಡಿಕೀಲುಗಳಲ್ಲಿ ಸ್ಥಾನ ಪಲ್ಲಟವಾದಲ್ಲಿ ಅದೂ ಕೂಡ ಇದರಿಂದ ಸರಿಹೋಗುತ್ತದೆ.ಪಾದಗಳ ಮೇಲೆ ಕೈಗಳ ಒತ್ತಡವು ಈ ಆಸನದಿಂದುಂ ಟಾಗುವುದರಿಂದ ಪಾದಗಳಲ್ಲಿ ಕಮಾನಿನಂತೆ ರೂಪು ನೆಲೆಗೊಂಡು ಚಪ್ಪಟೆಯ ಪಾದಗಳು ಈ ಮೂಲಕ ಸರಿ ಹೋಗುವುವು. ಅಲ್ಲದೆ ಕಾಲುಗಳ ಗಿಣ್ಣು ಪ್ರದೇಶದಲ್ಲಿ ನರ ಹೊರಳಿದುದೇ ಆದರೆ,ಅದನ್ನು ಕಳೆದು ಅದಕ್ಕೆ ಬಲಕೊಡುತ್ತದೆ ಈ ಆಸನದ ಭಂಗಿಯು ಹಿಮ್ಮಡಿಯ ನೋವನ್ನು ಕಳೆಯುವುದಿಲ್ಲದೆ,ಅಭ್ಯಾಸ ಹೆಚ್ಚಿದಂತೆಲ್ಲ ಅವುಗಳಲ್ಲಿಯ ಪೆಡಸನ್ನು ಕಳೆದು ಮೃದು ಮಾಡುತ್ತದೆ.ಇದೂ ಅಲ್ಲದೆ ಹಿಮ್ಮಡಿಯೆಲುಬಿನ ಹೆಬ್ಬೆಳೆಸಿ ನಿಂದ ಪೀಡಿತರಾದವರು ‘ವೀರಾಸನ’ದಿಂದಲೂ,ಈ ಆಸನದ ಅಭ್ಯಾಸದಿಂದಲೂ ಹೆಚ್ಚು ಪ್ರಯೋಜನವನ್ನು ಗಳಿಸಬಹುದು.