ಬೆಂಗಳೂರು(Bengaluru): ವಿಧಾನಸೌಧದ ಮುಂಭಾಗದಲ್ಲಿ ಜಗಜ್ಯೋತಿ ಬಸವೇಶ್ವರ ಮತ್ತು ನಾಡಪ್ರಭು ಕೆಂಪೇಗೌಡರ ಪುತ್ಥಳಿ ಸ್ಥಾಪನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಭೂಮಿಪೂಜೆ ನೆರವೇರಿಸಿದರು.
ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ, ಪಟ್ಟನಾಯಕನಹಳ್ಳಿಯ ಗುರುಗುಂಡ ಬ್ರಹ್ಮೇಶ್ವರ ಮಠದ ನಂಜಾವಧೂತ ಸ್ವಾಮೀಜಿ ಉಪಸ್ಥಿತಿಯಲ್ಲಿ ಭೂಮಿಪೂಜೆ ಸಮಾರಂಭ ನೆರವೇರಿತು.
ವಿಧಾನಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವರಾದ ಆರ್. ಅಶೋಕ, ಗೋವಿಂದ ಕಾರಜೋಳ, ಡಾ.ಸಿ.ಎನ್. ಅಶ್ವತ್ಥ ನಾರಾಯಣ, ಎಸ್.ಟಿ. ಸೋಮಶೇಖರ್, ಕೆ. ಗೋಪಾಲಯ್ಯ, ಮುನಿರತ್ನ, ಸಂಸದ ಡಿ.ವಿ. ಸದಾನಂದ ಗೌಡ ಉಪಸ್ಥಿತರಿದ್ದರು.
ಭೂಮಿಪೂಜೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಶ್ವಗುರು ಬಸವಣ್ಣ ಮತ್ತು ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡ ಅವರ ಚಿಂತನೆಗಳನ್ನು ನಾಡಿಗೆ ತಲುಪಿಸುವ ಉದ್ದೇಶದಿಂದ ವಿಧಾನಸೌಧದ ಆವರಣದಲ್ಲಿ ಈ ಇಬ್ಬರೂ ಮಹನೀಯರ ಪುತ್ಥಳಿ ಸ್ಥಾಪಿಸಲಾಗುತ್ತಿದೆ. ಎರಡು ತಿಂಗಳೊಳಗೆ ಈ ಕೆಲಸ ಪೂರ್ಣಗೊಳ್ಳಲಿದೆ ಎಂದರು.
ಕರ್ನಾಟಕದ ಸಮಗ್ರ ಅಭಿವೃದ್ಧಿಯ ಚಿಂತನೆಗೆ ಈ ಇಬ್ಬರ ಪುತ್ಥಳಿ ಸ್ಥಾಪನೆ ಪ್ರೇರಣೆಯಾಗಲಿದೆ. ಸಾಮರಸ್ಯ ಮತ್ತು ಸಮಗ್ರ ಅಭಿವೃದ್ಧಿಯ ಗುರಿ ಸಾಧನೆಗಾಗಿ ಈ ಪುತ್ಥಳಿಗಳ ಸ್ಥಾಪನೆ ಕೈಗೆತ್ತಿಕೊಳ್ಳಲಾಗಿದೆ. ಇದಕ್ಕಾಗಿ ಕಂದಾಯ ಸಚಿವ ಆರ್. ಅಶೋಕ ನೇತೃತ್ವದ ಉಪ ಸಮಿತಿಯು ವೇಗವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.