ಭೋಪಾಲ್: ಮಧ್ಯಪ್ರದೇಶದ ಝಬುವಾ ಜಿಲ್ಲೆಯ ಮೇಘನಗರ ಬಳಿಯ ಸಂಜೆಲಿ ರೈಲ್ವೆ ನಿಲ್ದಾಣದ ಬಳಿ ನಸುಕಿನ ಜಾವ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ 9 ಮಂದಿ ಅಂತ್ಯ ಕಂಡಿರುವ ದುರ್ಘಟನೆ ನಡೆದಿದೆ.
ಮೇಘನಗರದ ಶಿವಗಢ ಮಹುದಾ ಗ್ರಾಮದ ನಿವಾಸಿಗಳಾದ ಈ ಕುಟುಂಬದವರು ಮದುವೆ ಕಾರ್ಯಕ್ರಮವೊಂದರ ನಂತರ ತಮ್ಮ ಕಾರಿನಲ್ಲಿ ಗ್ರಾಮಕ್ಕೆ ಮರಳುತ್ತಿದ್ದರು. ಈ ವೇಳೆ ಅರ್ಥರಾತ್ರಿ ಸುಮಾರು 2:30ರ ಸುಮಾರಿಗೆ ನಿರ್ಮಾಣ ಹಂತದಲ್ಲಿದ್ದ ರೈಲು ಮೇಲ್ಸೇತುವೆ ಸಮೀಪದ ತಾತ್ಕಾಲಿಕ ರಸ್ತೆಮಾರ್ಗದಲ್ಲಿ ಸಿಮೆಂಟ್ ತುಂಬಿದ ಟಿಪ್ಪರ್ ಲಾರಿ ನಿಯಂತ್ರಣ ತಪ್ಪಿ ಕಾರಿನ ಮೇಲೆ ಮಗುಚಿ ಬಿದ್ದಿದೆ. ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.
ಸ್ಥಳದಲ್ಲೇ ಮೃತಪಟ್ಟವರು: ಮುಖೇಶ್ (40), ಸಾವ್ಲಿ (35), ವಿನೋದ್ (16), ಪಾಯಲ್ (12), ಮಾಧಿ (38), ವಿಜಯ್ ಭರು ಬಮಾನಿಯಾ (14), ಕಾಂತಾ (14), ರಾಗಿಣಿ (9), ಅಕಾಲಿ (35) ಎಂದು ತಿಳಿದು ಬಂದಿದೆ. ಗಂಭೀರವಾಗಿ ಗಾಯಗೊಂಡವರು: ಪಾಯಲ್ ಸೋಮ್ಲಾ (19), ಆಶು (5) ಇವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಅಪಘಾತ ನಂತರ ಟಿಪ್ಪರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಪೊಲೀಸರು ಆತನಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮೇಘನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














