ಮನೆ ಅಪರಾಧ ಭೋವಿ ನಿಗಮ ಹಗರಣ: ಇಡಿ ದಾಳಿ, ದಾಖಲೆಗಳು ವಶಕ್ಕೆ

ಭೋವಿ ನಿಗಮ ಹಗರಣ: ಇಡಿ ದಾಳಿ, ದಾಖಲೆಗಳು ವಶಕ್ಕೆ

0

ಬೆಂಗಳೂರು: ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಕೋಟ್ಯಂತರ ರು. ಹಗರಣದ ಸಂಬಂಧ ಜಾರಿ ನಿರ್ದೇಶನಾಲಯ(ಇ.ಡಿ) ಅಧಿಕಾರಿಗಳು ಬೆಂಗಳೂರು ಮತ್ತು ಶಿವಮೊಗ್ಗ ಸೇರಿ 10 ಸ್ಥಳಗಳ ಮೇಲೆ ದಾಳಿ ನಡೆಸಿ ಹಲವು ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಒಂಬತ್ತು ಕಡೆ ಮತ್ತು ಶಿವಮೊಗ್ಗದಲ್ಲಿ ಒಂದು ಕಡೆ ದಾಳಿ ನಡೆಸಲಾಗಿದೆ. ಶುಕ್ರವಾರ ಬೆಳಗ್ಗೆ ಈ ಹಿಂದೆ ಭೋವಿ ನಿಗಮದ ಪ್ರಧಾನ ವ್ಯವಸ್ಥಾಪಕರಾಗಿದ್ದ ಡಾ.ಬಿ.ಕೆ.ನಾಗರಾಜಪ್ಪ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಲೀಲಾವತಿ ಅವರಿಗೆ ಸೇರಿದ ಸ್ಥಳಗಳಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ. 

ವಿಜಯನಗರದಲ್ಲಿರುವ ನಾಗರಾಜಪ್ಪ ಮತ್ತು ಜಾಲಹಳ್ಳಿಯಲ್ಲಿರುವ ಲೀಲಾವತಿಯವರ ನಿವಾಸ ಸೇರಿ ಅವರಿಗೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆಸಿ ಶೋಧ ಕಾರ್ಯ ನಡೆಸಲಾಗಿದೆ. ಇದೇ ವೇಳೆ ಭೋವಿ ನಿಗಮದ ಅಧೀಕ್ಷಕರಾಗಿದ್ದ ಪಿ.ಡಿ.ಸುಬ್ಬಪ್ಪ ಅವರ ಸರಸ್ವತಿ ನಗರದಲ್ಲಿನ ನಿವಾಸದಲ್ಲೂ ಕಾರ್ಯಾಚರಣೆ ನಡೆಸಲಾಗಿದೆ ಎಂದು ಮೂಲಗಳು ಹೇಳಿವೆ. ದಾಳಿ ವೇಳೆ ಬ್ಯಾಂಕ್ ಖಾತೆಗಳ ವಿವರ, ಸ್ಥಿರಾಸ್ತಿ-ಚರಾಸ್ತಿಗಳು, ಸಂಬಂಧಿಕರ ಹೆಸರಿನಲ್ಲಿ ಸಂಪಾದನೆ ಮಾಡಿದ್ದ ಆಸ್ತಿ ಮತ್ತಿತರ ದಾಖಲೆಗಳು ಲಭ್ಯವಾಗಿದ್ದು, ಇ.ಡಿ ಅಧಿಕಾರಿಗಳು ಅವುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ಭೋವಿ ಅಭಿವೃದ್ಧಿ ನಿಗಮದ ಉದ್ಯಮಶೀಲತಾ ಯೋಜನೆ ಮತ್ತು ನೇರ ಸಾಲ ಯೋಜನೆಗಳಡಿ ಲಕ್ಷಾಂತರ ರು. ಸಾಲ ಕೊಡಿಸುವುದಾಗಿ ಮಧ್ಯವರ್ತಿಗಳ ಮೂಲಕ ಆಮಿಷವೊಡ್ಡಿ ಸಾರ್ವಜನಿಕರ ಗುರುತಿನ ದಾಖಲೆಗಳು, ಬ್ಯಾಂಕ್ ಚೆಕ್ ಪಡೆದು ದುರ್ಬಳಕೆ ಮಾಡಿಕೊಂಡಿರುವ ಆರೋಪ ಇತ್ತು. ಅಕ್ರಮ ಹಣ ವರ್ಗಾವಣೆ ಆರೋಪದ ಮೇರೆಗೆ ಇ.ಡಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.