ಮೈಸೂರು: ಮೈಸೂರು ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಶೀಘ್ರದಲ್ಲೇ ಭೂಮಿ ಪೂಜೆ ನೆರವೇರಿಸಲಾಗುವುದು ಎಂದು ಸಂಸದ ಪ್ರತಾಪ ಸಿಂಹ ತಿಳಿಸಿದರು.
ಇಲ್ಲಿನ ಜಲದರ್ಶಿನಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.
ಮೊದಲ ಹಂತದಲ್ಲಿ ₹ 150 ಕೋಟಿ ಬಿಡುಗಡೆಯಾಗಿದೆ. ರನ್ ವೇ ವಿಸ್ತರಣೆಗೆ 160 ಎಕರೆ ಜಮೀನು ಬೇಕು. ಈವರೆಗೆ 47 ಎಕರೆಗೆ ಅಧಿಸೂಚನೆ ಹೊರಡಿಸಲಾಗಿದೆ. ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಮೈಸೂರು- ನಂಜನಗೂಡು ಹೆದ್ದಾರಿಯನ್ನು ಡೈವರ್ಟ್ ಮಾಡಲಾಗುವುದು ಎಂದು ಹೇಳಿದರು.
ಮೈಸೂರು- ಬೆಂಗಳೂರು ಎಕ್ಸ್’ಪ್ರೆಸ್ ಹೈವೇ ಉದ್ಘಾಟನೆಯನ್ನು ಮಾರ್ಚ್ 11ರಂದು ಮಂಡ್ಯ ಜಿಲ್ಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಅದೇ ದಿನ ಮೈಸೂರು- ಕುಶಾಲನಗರ ನಾಲ್ಕು ಪಥದ ಹೆದ್ದಾರಿ ನಿರ್ಮಾಣಕ್ಕೂ ಗುದ್ದಲಿ ಪೂಜೆ ನೆರವೇರಲಿದೆ. ಮಂಡ್ಯ ಜಿಲ್ಲೆಯವರು ಬಿಜೆಪಿಯವರನ್ನೇನೂ ಗಲ್ಲಿಸಿಲ್ಲ. ಆದರೂ ನಾವೇನೂ ತಾರತಮ್ಯ ಮಾಡಿಲ್ಲ. ಮಂಡ್ಯದಲ್ಲೂ ಅಭಿವೃದ್ಧಿ ಮಾಡುತ್ತಿದ್ದೇವೆ. ದಶಪಥಕ್ಕೆ ಕಾವೇರಿ ಹೆಸರಿಡಲು ಎಲ್ಲರ ಸಹಕಾರ ಕೇಳುತ್ತೇನೆ ಎಂದರು.
ರಾಜ್ಯ ರಾಜಕಾರಣಕ್ಕೆ ಬರುತ್ತೀರಾ ಎಂಬ ಪ್ರಶ್ನೆಗೆ, ನಾನು 2029ರವರೆಗೆ ಮಾತ್ರ ರಾಜಕೀಯದಲ್ಲಿರಲು ಯೋಜಿಸಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಕೈ ಕೆಳಗೆ ಕೆಲಸ ಮಾಡಲಷ್ಟೆ ನನಗಿಷ್ಟ. ನಾನು ದೀರ್ಘಾವಧಿಗೆ ರಾಜಕೀಯದಲ್ಲಿರಲು ಯೋಚಿಸಿಲ್ಲ ಎಂದು ಪ್ರತಿಕ್ರಿಯಿಸಿದರು.
ಬಿ.ಎಸ್.ಯಡಿಯೂರಪ್ಪ ಅವರು, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹಾಗೂ ಉಳಿದವರ ರಾಜಕಾರಣವನ್ನೆಲ್ಲಾ ಮುಗಿಸುವವರೆಗೂ ಸಕ್ರಿಯ ರಾಜಕಾರಣದಲ್ಲಿ ಇರುತ್ತಾರೆ. ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುತ್ತಾರೆ ಎಂದರು.
ತಾಲಿಬಾನ್ ಹೇಳಿಕೆ ಸಮರ್ಥಿಸಿಕೊಂಡ ಪ್ರತಾಪ್ ಸಿಂಹ
ತಮ್ಮ ತಾಲಿಬಾನ್ ಹೇಳಿಕೆಯನ್ನು ಸಂಸದ ಪ್ರತಾಪ್ ಸಿಂಹ ಅವರು ಸಮರ್ಥಿಸಿಕೊಂಡಿದ್ದು, “ಹೌದು, ನಾನು ಕಾಂಗ್ರೆಸ್ ಕುರಿತು ಹೇಳಿಕೆ ನೀಡಿದ್ದೇನೆ. ಸಿದ್ದರಾಮಯ್ಯ ಕೆಎಫ್’ಡಿ, ಪಿಎಫ್’ಐ ಮೇಲಿನ ಕೇಸ್ ವಾಪಸ್ ತೆಗೆದುಕೊಂಡರು. ಇದರ ಪರಿಣಾಮವಾಗಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಕೊಲೆಯಾದವು. ಕಾಂಗ್ರೆಸ್‌ನವರು ಅಧಿಕಾರಕ್ಕೆ ಬಂದರೆ ತಾಲಿಬಾನ್ ಸರ್ಕಾರ ಬರುತ್ತದೆ. ಕಪಾಲಿ ಬೆಟ್ಟವನ್ನು ಯೇಸು ಬೆಟ್ಟ ಮಾಡುತ್ತಾರೆ. ಆ ನಿಟ್ಟಿನಲ್ಲಿ ಹೇಳಿಕೆ ನೀಡಿದ್ದೇನೆ ಎಂದರು.