ಅಹಮದಾಬಾದ್(Ahmadabad): ಗುಜರಾತ್’ನಲ್ಲಿ ಸತತ 7ನೇ ಬಾರಿಗೆ ಐತಿಹಾಸಿಕ ಜಯದತ್ತ ಬಿಜೆಪಿ ಸಾಗಿದ್ದು, 150ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಬಿಜೆಪಿಯ ಅಭ್ಯರ್ಥಿಗಳು ಮುನ್ನಡೆ ಪಡೆದಿದ್ದಾರೆ.
ಈ ಹಿನ್ನೆಲೆಯಲ್ಲಿ ಇದೇ 12ರಂದು ಭೂಪೇಂದ್ರ ಪಟೇಲ್ 2ನೇ ಬಾರಿ ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಮುಖ್ಯಮಂತ್ರಿ ಪದಗ್ರಹಣ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸಹ ಭಾಗವಹಿಸಲಿದ್ದಾರೆ ಎಂದು ಎಎನ್‌ಐ ಟ್ವೀಟ್ ನಲ್ಲಿ ತಿಳಿಸಿದೆ.
ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮಾತನಾಡಿ, ಅಭಿವೃದ್ಧಿ ಪರವಾದ ಆಡಳಿತದ ಜೊತೆ ಮುಂದುವರಿಯಲು ಜನ ನಿರ್ಧರಿಸಿರುವುದನ್ನು ಈ ಫಲಿತಾಂಶ ಸೂಚಿಸುತ್ತದೆ. ಜನರ ತೀರ್ಪನ್ನು ಅತ್ಯಂತ ವಿನಮ್ರತೆಯಿಂದ ಸ್ವೀಕರಿಸುತ್ತೇವೆ. ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತನು ಅಭಿವೃದ್ಧಿ ಪರವಾಗಿ ಕೆಲಸ ಮಾಡಲು ಬದ್ಧರಾಗಿದ್ದಾನೆ ಎಂದು ಹೇಳಿದ್ದಾರೆ.
ಮಧ್ಯಾಹ್ನ 2ರವರೆಗಿನ ಮಾಹಿತಿ ಪ್ರಕಾರ, ಗುಜರಾತ್’ನಲ್ಲಿ ಬಿಜೆಪಿ 158 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದಿದ್ದರೆ, ಕಾಂಗ್ರೆಸ್ 16ರಿಂದ 18 ಕ್ಷೇತ್ರಗಳಲ್ಲಿ ಮುನ್ನಡೆಯಲಿತ್ತು. ಬಹಳ ನಿರೀಕ್ಷೆ ಇಟ್ಟುಕೊಂಡಿದ್ದ ಆಮ್ ಆದ್ಮಿ ಪಕ್ಷ(ಎಎಪಿ) ಕೇವಲ 7ರಲ್ಲಿ ಮುನ್ನಡೆ ಪಡೆದುಕೊಂಡಿದೆ. 186 ಕ್ಷೇತ್ರಗಳ ಪೈಕಿ ಈ ಬಾರಿ ದಾಖಲೆಯ 158 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯದತ್ತ ಮುಖ ಮಾಡಿದ್ದಾರೆ.
ಇಂದು ಸಂಜೆ 6.30ರ ವೇಳೆಗೆ ನವದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.