ಬೀದರ್ : ರಾಜ್ಯದ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಜಾಫರವಾಡಿ ಗ್ರಾಮದಲ್ಲಿ ಮಾನವೀಯತೆಯ ಮಿತಿಗಳನ್ನು ಮೀರಿ ನಡೆದ ಭೀಕರ ಕೊಲೆ ಪ್ರಕರಣ ಒಂದರಿಂದ ಗ್ರಾಮಸ್ಥರು ತಲ್ಲಣಗೊಂಡಿದ್ದಾರೆ. ಸಂಧಾನದ ಹೆಸರಿನಲ್ಲಿ ಕರೆಸಿ, ಯುವಕರಿಬ್ಬರು ದಂಪತಿಯ ಕತ್ತು ಸೀಳಿ ಬರ್ಬರವಾಗಿ ಹತ್ಯೆಗೈದ ಘಟನೆ ನಡೆದಿದೆ.
ಘಟನೆಯಲ್ಲಿ ಮೃತಪಟ್ಟವರು ಜಾಫರವಾಡಿಯ ನಿವಾಸಿಗಳಾದ ರಾಜು ಕೊಳಸುರೆ (28) ಹಾಗೂ ಆತನ ಪತ್ನಿ ಶಾರಿಕಾ ಕೊಳಸುರೆ (24) ಆಗಿದ್ದಾರೆ. ಶಾರಿಕಾ ಗರ್ಭಿಣಿಯಾಗಿದ್ದರೆಂಬ ಮಾಹಿತಿ ದೃಢಪಟ್ಟಿದೆ. ಈ ದಂಪತಿ ತಮ್ಮ 2 ವರ್ಷದ ಮಗುವಿನೊಂದಿಗೆ ಮುಂಬೈನಲ್ಲಿ ವಾಸವಿದ್ದು, ಕೆಲವು ಸಮಯದ ಹಿಂದೆ ಗ್ರಾಮವನ್ನು ತೊರೆದಿದ್ದರು.
ರಾಜು ಅನೈತಿಕ ಸಂಬಂಧ ಹೊಂದಿದ್ದ ಎಂಬ ಶಂಕೆಯಿಂದ ಈ ದಂಪತಿಯ ಹತ್ಯೆ ನಡೆದಿದೆ ಎನ್ನಲಾಗಿದೆ. ಇದೇ ಕಾರಣಕ್ಕಾಗಿ ಸಂಬಂಧಿತ ಯುವತಿ ಕುಟುಂಬದವರು ರಾಜು ಮತ್ತು ಶಾರಿಕಾವನ್ನು “ಸಂಧಾನಕ್ಕೆ” ಎಂದು ಗ್ರಾಮಕ್ಕೆ ಕರೆಸಿ, ಜಾಫರವಾಡಿ ಗ್ರಾಮದ ಹೊರವಲಯದಲ್ಲಿ ಅವರ ಕತ್ತು ಸೀಳಿದ್ದಾರೆ. ಇಡೀ ಘಟನೆಯನ್ನು ಅವರ 2 ವರ್ಷದ ಮಗು ನೋಡುತ್ತಿದ್ದು ಎನ್ನಲಾಗಿದೆ. ದಂಪತಿ ಕೊಲೆಯಾದ ಬಳಿಕ 2 ವರ್ಷದ ಮಗು ಅನಾಥವಾಗಿದೆ.
ಘಟನೆ ಬಳಿಕ ಆರೋಪಿ ದತ್ತಾತ್ರೇಯ ಹಾಗೂ ತುಕಾರಾಮ್ ಎಂಬುವವರು ಪೊಲೀಸ್ ಠಾಣೆಗೆ ಶರಣಾಗಿದ್ದಾರೆ. ದತ್ತಾತ್ರೇಯನ ತಂಗಿಯೊಂದಿಗೆ ರಾಜು ಅನೈತಿಕ ಸಂಬಂಧ ಹೊಂದಿದ್ದ ಎಂಬ ಕಾರಣಕ್ಕಾಗಿ ಈ ಕೊಲೆಯಾಗಿದೆ ಎಂಬ ಶಂಕೆ ಇದೆ.
ಮಂಠಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಘಟನೆಗೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದಾರೆ. ಹಿಂದಿನ ವೈಷಮ್ಯ, ಕುಟುಂಬದೊಳಗಿನ ಸಂಬಂಧಗಳು, ಹಾಗೂ ಮಾನಸಿಕ ಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ತನಿಖೆ ಮುಂದುವರಿಸುತ್ತಿದ್ದಾರೆ. ಮಗುವಿನ ಭದ್ರತೆ ಹಾಗೂ ಅದರ ಸಂರಕ್ಷಣೆಗೂ ಕ್ರಮಗಳನ್ನು ಕೈಗೊಳ್ಳಲಾಗಿದೆ.














