ಬೀದರ್: ಬೀದರ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆ ಅವರು ಜಯ ಗಳಿಸುವುದು ಬಹುತೇಕ ನಿಶ್ಚಿತವಾಗಿದ್ದು, ಅಧಿಕೃತ ಘೋಷಣೆಯಷ್ಟೇ ಬಾಕಿದೆ. ಉಳಿದಿದೆ.
ಪ್ರಸಕ್ತ ಲೋಕಸಭೆಗೆ ಆಯ್ಕೆಯಾದ ಸಂಸದರಲ್ಲಿ ಅತಿ ಕಿರಿಯ ವಯಸ್ಸಿನವರು ಸಾಗರ್ ಖಂಡ್ರೆ. ಎಲ್‌ಎಲ್‌ಬಿ ಪದವೀಧರರಾಗಿರುವ ಅವರಿಗೆ ಈಗ 26 ವರ್ಷ ವಯಸ್ಸು. ಎದುರಿಸಿದ ಮೊದಲ ಚುನಾವಣೆಯಲ್ಲೇ ಬಿಜೆಪಿ ಅಭ್ಯರ್ಥಿ, ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ ಸೋಲಿನ ರುಚಿ ತೋರಿಸಿ ಸಂಸತ್ತು ಪ್ರವೇಶಿಸಿದ್ದಾರೆ.
ಈ ಹಿಂದಿನ ಚುನಾವಣೆಗಳಲ್ಲಿ ಕ್ರಮವಾಗಿ ಮಾಜಿಮುಖ್ಯಮಂತ್ರಿ ಎನ್.ಧರ್ಮಸಿಂಗ್, ಸಚಿವ ಈಶ್ವರ ಬಿ. ಖಂಡ್ರೆಯವರನ್ನು ಸೋಲಿಸಿ ಭಗವಂತ ಖೂಬಾ ಅವರು ಕೇಂದ್ರದಲ್ಲಿ ಮಂತ್ರಿಯಾಗಿದ್ದರು. ತಮ್ಮ ತಂದೆಯನ್ನು ಚುನಾವಣೆಯಲ್ಲಿ ಸೋಲಿಸಿದ್ದ ಖೂಬಾ ಅವರನ್ನು ಈ ಚುನಾವಣೆಯಲ್ಲಿ ಮಣಿಸಿ ಸಾಗರ್ ಖಂಡ್ರೆ ಸೇಡು ತೀರಿಸಿಕೊಂಡಿದ್ದಾರೆ.
ಸಾಗರ್ ಖಂಡ್ರೆ ಅವರು 6,65,162 ಮತಗಳನ್ನು ಪಡೆದರೆ, ಭಗವಂತ ಖೂಬಾ ಅವರು 5,35,766 ಮತ ಗಳಿಸಿದ್ದಾರೆ. ಸಾಗರ್ ಅವರು ಪ್ರತಿಸ್ಪರ್ಧಿಗಿಂತ 1,29,396 ಹೆಚ್ಚುವರಿ ಮತಗಳನ್ನು ಪಡೆದಿದ್ದಾರೆ.
ಅತಿಯಾದ ಆತ್ಮವಿಶ್ವಾಸ. ಮೋದಿಯವರ ಹೆಸರಿನಲ್ಲಿ ಗೆದ್ದು ಬರುವೆ ಎಂಬ ವಿಶ್ವಾಸದಲ್ಲಿ ಪಕ್ಷದ ಶಾಸಕರು, ಮುಖಂಡರು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಇದರ ಪರಿಣಾಮ ಸ್ವಪಕ್ಷೀಯರೇ ಪೂರ್ಣ ಮನಸ್ಸಿನಿಂದ ಚುನಾವಣೆಯಲ್ಲಿ ಕೆಲಸ ಮಾಡಲಿಲ್ಲ. ಹಿಂದಿನ ಎರಡೂ ಚುನಾವಣೆಗಳಲ್ಲಿ ಮೋದಿ ಅಲೆಯಲ್ಲಿ ಗೆದ್ದಿದ್ದ ಅವರಿಗೆ ಈ ಸಲ ಅದು ನೆರವಿಗೆ ಬರಲಿಲ್ಲ. ಅವರ ಒರಟು ಸ್ವಭಾವ ಕೂಡ ಜನರಿಗೆ ಇಷ್ಟವಾಗಲಿಲ್ಲ. ಚುನಾವಣೆಯನ್ನು ಬಿಜೆಪಿ ಸಂಘಟಿತವಾಗಿ ಎದುರಿಸಲಿಲ್ಲ. ಆದರೆ, ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅವರು ಮಗನ ಗೆಲುವಿಗೆ ಅವಿರತ ಶ್ರಮಿಸಿದರು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸಿದರು. ಇದರಿಂದಾಗಿ ಸಾಗರ್ ಖಂಡ್ರೆ ಸುಲಭವಾಗಿ ಗೆಲುವಿನ ದಡ ಸೇರಿಸಿದರು. ಖೂಬಾ ಯಾವ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ
ಬೀದರ್ ಲೋಕಸಭಾ ಕ್ಷೇತ್ರ; ಕೊನೆಯ ಸುತ್ತಿನ ಮತ ಎಣಿಕೆ
ಸಾಗರ್ ಖಂಡ್ರೆ (ಕಾಂಗ್ರೆಸ್); 6,65,162
ಭಗವಂತ ಖೂಬಾ (ಬಿಜೆಪಿ); 5,35,766
ಮುನ್ನಡೆ; 1,29,396