ಮನೆ ಮನೆ ಮದ್ದು  ದೊಡ್ಡಪತ್ರೆ

 ದೊಡ್ಡಪತ್ರೆ

0

ದೊಡ್ಡಪತ್ರೆಯ ತವರು ಭಾರತ ಎಲೆ ಖಾರ ಇರುವುದರಿಂದ ಸಲಾಡ್‌ ಮತ್ತು ಮಾಂಸಾಹಾರದಲ್ಲಿ ಹೆಚ್ಚು ಬಳಸಲಾಗುತ್ತಿದೆ. ಇದೊಂದು ಸುವಾಸನಾ ಭರಿತ ಗಿಡವಾಗಿದೆ. ದೊಡ್ಡಪತ್ರೆ ಎಲೆಯಿಂದ ಚಟ್ನಿ. ತಂಬುಳಿ ತಯಾರಿಸುತ್ತಾರೆ.

Join Our Whatsapp Group

 ಸಸ್ಯವರ್ಣನೆ

ಕೋಲಿಯಸ್ ಅಂಬಾನಿಕಸ್ ಎಂಬ ವೈಜ್ಞಾನಿಕ ಹೆಸರುಳ್ಳ ಈ ಸಸ್ಯವು ಲ್ಯಾಮಿಯೇಸಿ ಕುಟುಂಬಕ್ಕೆ ಸೇರಿದೆ. ಗಿಡದ ಕಾಂಡ ರಸಭರಿತವಾಗಿರುತ್ತದೆ. ನೆಲಕ್ಕೆ ತಾಗುವ ಗಿಣ್ಣುಗಳಿಂದ ಬೇರುಗಳು ಮೊಳೆಯುತ್ತವೆ. ಕಾಂಡದ ಬುಡದ ಕಡೆ ನುಣುಪಾಗಿದ್ದು ಹೊಳಪಿನಿಂದ ಕೂಡಿರುತ್ತದೆ. ಆದರೆ ತುದಿ ಭಾಗದ ಕಡೆ ರೋಮಗಳು ಮತ್ತು ರೋಮಗ್ರಂಥಿಗಳಿರುವುದರಿಂದ ಹೊಳಪುತನ ಕಂಡುಬರುವುದಿಲ್ಲ. ರಸಭರಿತ ಎಲೆಗಳು ಅಗಲವಾಗಿ ಅಂಡಾಕಾರವಾಗಿರುತ್ತವೆ. ಎಲೆಯ ಅಂಚು ಹಲ್ಲಿನಂತಿರುತ್ತದೆ. ಗಿಡದ ಎಲ್ಲಾ ಭಾಗದಿಂದಲೂ ಒಂದು ರೀತಿಯ ಸುವಾಸನೆ ಹೊಮ್ಮುತ್ತಿರುತ್ತದೆ.

 ಮಣ್ಣು

ಈ ಬೆಳೆಗೆ ಚೆನ್ನಾಗಿ ನೀರು ಬಸಿದುಹೋಗಬಲ್ಲ ಮರಳು ಮಿಶ್ರಿತ ಮಣ್ಣು ಸೂಕ್ತ

 ಹವಾಗುಣ

ಈ ಬೆಳೆಯು ಕಡಿಮೆ ಆದ್ರ್ರತೆ ಮತ್ತು ಸ್ವಲ್ಪ ಬೆಚ್ಚಗಿನ ವಾತಾವರಣವನ್ನು ಬಯಸುತ್ತದೆ

 ಸಸ್ಯಾಭಿವೃದ್ಧಿ

ಇದನ್ನು ಕಾಂಡದ ತುಂಡುಗಳ ಮೂಲಕ ಸಸ್ಯಾಭಿವೃದ್ಧಿ ಮಾಡಬಹುದು. ಅಂದರೆ, ತುದಿ ಕಾಂಡದ ತುಂಡುಗಳಿಂದ ಸಸ್ಯಾಭಿವೃದ್ಧಿ ಮಾಡಲಾಗುತ್ತದೆ. 11 ದಿನ 3-4 ಜೊತೆ ಎಲೆಗಳನ್ನು ಹೊಂದಿರುವ 10-12 ಸೆಂ.ಮೀ. ಉದ್ದದ ತುಂಡುಗಳು ಸೂಕ್ತ ಇಂತಹ ತುಂಡುಗಳನ್ನು” ಹದವಾಗಿ ತಯಾರಿಸಿದ ಸಸಿ ಮಡಿಗಳಲ್ಲಿ ಬೆಳೆಯಬಹುದು. 30 ದಿನಗಳ ನಂತರ ಚೆನ್ನಾಗಿ ಬೇರುಬಿಟ್ಟ ಕಾಂಡದ ತುಂಡುಗಳನ್ನು ನಾಟಿ ಮಾಡಲು ಬಳಸಬಹುದು.

 ನಾಟಿ ಮಾಡುವುದು

ಜೂನ್-ಜುಲೈ ತಿಂಗಳಲ್ಲಿ ಮಳೆಗಾಲದ ಪ್ರಾರಂಭದೊಂದಿಗೆ ನಾಟಿಯನ್ನು ಮಾಡಲಾಗುತ್ತದೆ. ನಾಟಿ ಮಾಡುವುದಕ್ಕೆ ಮುನ್ನ ಒಂದು ಚದರ ಮೀಟರ್ ಭೂಮಿಯನ್ನು ಚೆನ್ನಾಗಿ ಸಿದ್ಧಗೊಳಿಸಿ ತಾಕು ಮತ್ತು ದಂಡು ಕಾಲುವೆಗಳನ್ನು ಮಾಡಿ ತಾಕುಗಳಲ್ಲಿ 45-60 ಸೆ.ಮೀ. ಅಂತರದಲ್ಲಿ ಗಿಡಗಳನ್ನು ನಾಟ ಮಾಡಬೇಕು.

 ನೀರಾವರಿ

ನಾಟಿ ಮಾಡಿದ ಕೂಡಲೇ ನೀರು ಹಾಯಿಸಬೇಕು. ಆನಂತರ ವಾರಕ್ಕೊಮ್ಮೆ ನೀರು ನೀಡಿದಲ್ಲಿ ಗಿಡವು ಚೆನ್ನಾಗಿ ಬೆಳೆಯುತ್ತದೆ.

 ಕಳೆ ನಿಯಂತ್ರಣ

ಬೆಳೆಯ ಪ್ರಾರಂಭದಲ್ಲಿ ಕಳೆಗಳು ಇರುತ್ತವಾದರೂ ನೆಲ ಮುಚ್ಚುವಂತೆ ಬೆಳೆ ಆವರಿಸಿದೊಡನೆ ಕಳೆಗಳ ಬೆಳವಣಿಗೆ ಕುಂಠಿತವಾಗುತ್ತದೆ

 ಕೀಟ ಮತ್ತು ರೋಗಗಳು

ಸೊರಗು ರೋಗ, ಎಲೆ ತಿನ್ನುವ ಕಂಬಳಿ ಹುಳು, ತಿಗಣೆ, ಬೇರು ದುಂಡು ಜಂತು ಕಂಡುಬರುತ್ತದೆ. ಬೇವಿನ ಹಿಂಡಿ ಅಥವಾ ನೀಮ್ ಗೋಲ್ಡ್ ದ್ರಾವಣವನ್ನು ಭೂಮಿಗೆ ಸೇರಿಸುವುದರಿಂದ ಈ ಬಾಧೆಯನ್ನು ತಡೆಗಟ್ಟಬಹುದು.

 ಕೊಯ್ದು ಮತ್ತು ಇಳುವರಿ

ನಾಟಿ ಮಾಡಿದ 3 ತಿಂಗಳಲ್ಲಿ ಇದರ ಎಲೆಯನ್ನು ಕಟಾವು ಮಾಡಿ ಉಪಯೋಗಿಸಬಹುದು ಹಾಗೂ ಒಂದು ಚ.ಮೀಟರ್‌ನಲ್ಲಿ 2ರಿಂದ 3 ಕೆ.ಜಿ.ಯಷ್ಟು ಎಲೆಯ ಇಳುವರಿಯನ್ನು ಪಡೆಯಬಹುದು.

 ಔಷಧೀಯ ಗುಣಗಳು

★ಕೆಮ್ಮು ಹಾಗೂ ಗಂಟಲು ನೋವಿನಿಂದ ಬಳಲುವವರು ದೊಡ್ಡಪತ್ರೆಯ ಎಲೆಯ ರಸವನ್ನು ಜೇನುತುಪ್ಪದೊಂದಿಗೆ ಸೇವನೆ ಮಾಡಬೇಕು.

★ ಮಕ್ಕಳಲ್ಲಿ ಆಜೀರ್ಣವುಂಟಾಗಿದ್ದಲ್ಲಿ ದೊಡ್ಡಪತ್ರೆಯ ಎಲೆಯ ರಸಕ್ಕೆ ಜೇನು ಬೆರೆಸಿ ಕುಡಿಸುವುದರಿಂದ ಹೊಟ್ಟೆಯುಬ್ಬರ, ಹೊಟ್ಟೆನೋವು ಕಡಿಮೆಯಾಗುತ್ತದೆ.

★ಮೈಮೇಲೆ ಪಿತ್ತದ ಗಂಧೆಗಳುಂಟಾಗಿದ್ದಲ್ಲಿ ದೊಡ್ಡಪತ್ರೆ ಎಲೆಗಳಿಗೆ ಉಪ್ಪು ಸವರಿ ತಿನ್ನಬೇಕು ಮತ್ತು ಎಲೆಯನ್ನು ಅರೆದು ರಸವನ್ನು ಮೈಗೆ ಹಚ್ಚಿಕೊಳ್ಳುವುದರಿಂದ ಗಂಧ ಕಡಿಮೆಯಾಗುತ್ತದೆ.

★ಮಕ್ಕಳಲ್ಲಿ ಕೆಮ್ಮಿನಿಂದ ಕೂಡಿದ ಜ್ವರವಿದ್ದಲ್ಲಿ ದೊಡ್ಡಪತ್ರೆ ಎಲೆಯ ರಸ ಅರ್ಧಚಮಚೆಗೆ ಒಂದು ಚಿಟಿಕೆ ಹಿಪ್ಪಲಿ ಪುಡಿ ಮತ್ತು ಸ್ವಲ್ಪ ಜೇನುತುಪ್ಪ ಬೆರೆಸಿ ಕುಡಿಸಬೇಕು.

★ಜೇನುಹುಳು ಮತ್ತು ಕ್ರಿಮಿಕೀಟಗಳು ಕಚ್ಚಿದಾಗ ದೊಡ್ಡಪತ್ರೆ ಎಲೆಯನ್ನು ಅರೆದು ಕಡಿದ ಜಾಗದಲ್ಲಿ ಲೇಪಿಸುವುದರಿಂದ ನೋವು, ಉರಿ ತಗ್ಗುತ್ತದೆ.

★ ಸಂಧಿವಾತದಿಂದ ಬಳಲುವವರು ಎಲೆಯನ್ನು ಅರೆದು ಲೇಪಿಸಿಕೊಳ್ಳಬೇಕು.

★ಮೂತ್ರಕೋಶದ ಕಲ್ಲುಗಳ ತೊಂದರೆಯಿದ್ದಲ್ಲಿ ಎಲೆಯನ್ನು ಪ್ರತಿದಿನ ಚಟ್ಟಿ ಮಾಡಿ ತಿನ್ನುವುದರಿಂದ ಕಲ್ಲು ಕರಗುತ್ತದೆ.

★ ತಲೆನೋವಿದ್ದಲ್ಲಿ ಎಲೆಗಳನ್ನು ಸ್ವಚ್ಛಗೊಳಿಸಿ ಅರೆಯಬೇಕು. ನಂತರ ಇದನ್ನು ಹಣೆಗೆ ಲೇಪಿಸಿಕೊಳ್ಳಬೇಕು. ತಲೆಭಾರ, ತಲೆನೋವು 10ರಿಂದ ಶಮನವಾಗುತ್ತದೆ. 15 ನಿಮಿಷಗಳಲ್ಲಿ ಶಮನವಾಗುತ್ತದೆ

★ಭೇದಿಯಾಗುತ್ತಿದ್ದಲ್ಲಿ : ತಾಜಾ ದೊಡ್ಡಪತ್ರೆಯ ಎಲೆಗಳ ರಸವನ್ನು ಒಂದು ಚಮಚೆ ಕುಡಿಯಬೇಕು. ಪ್ರತಿ ಒಂದು ಗಂಟೆಗೆ ಅರ್ಧ ಚಮಚ ರಸ ಕುಡಿದಲ್ಲಿ ಭೇದಿ ನಿಯಂತ್ರಣಕ್ಕೆ ಬರುತ್ತದೆ

★ರಸ ತಯಾರಿಸುವ ವಿಧಾನ, ಎಲೆಗಳನ್ನು ಸ್ವಚ್ಛಗೊಳಿಸಿಕೊಳ್ಳಬೇಕು ನಂತರ ಅವುಗಳನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಹೆಚ್ಚಿಕೊಂಡು ರುಬ್ಬಿಕೊಳ್ಳಬೇಕು. ಸ್ವಚ್ಛವಾದ ತೆಳುವಾದ ಬಿಳಿಯ ಹತ್ತಿ ಬಟ್ಟೆಯಲ್ಲಿ ರುಬ್ಬಿದ ಪದಾರ್ಥವನ್ನು (paste) ಹಾಕಿ ಹಿಂಡಬೇಕು. ಬಟ್ಟೆಯ ಮೂಲಕ ಶೋಧಿಸಿ ಬಂದ ರಸವನ್ನು ಬಳಸಬೇಕು.

★ಗಂಟಲುನೋವು : ಟಾನ್ಸಿಲೈಟಿಸ್‌ನಿಂದ ಗಂಟಲುನೋವು ಉಂಟಾಗಿದ್ದಲ್ಲಿ ದೊಡ್ಡಪತ್ರೆಯ ಎಲೆಗಳನ್ನು (2-4) ದಿನಕ್ಕೆ ಮೂರು ಬಾರಿ ಆಗಿದು ತಿನ್ನಬೇಕು.

 ಅಡುಗೆ

 ತಂಬುಳಿ : ಬಾಣಲೆಯಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿ ದೊಡ್ಡಪತ್ರೆ ಎಲೆಗಳು ಮತ್ತು ಜೀರಿಗೆಯನ್ನು ಹುರಿದು ಸ್ವಲ್ಪ ತೆಂಗಿನ ತುರಿಯೊಂದಿಗೆ ಅರೆದು ಉಪ್ಪು ಹಾಕಿ ಮಜ್ಜಿಗೆ ಅಥವಾ ಮೊಸರಿನಲ್ಲಿ ಬೆರೆಸಬೇಕು. ಬೇಕೆನಿಸಿದಲ್ಲಿ ಒಗ್ಗರಣೆ ಹಾಕಬಹುದು.

 ಚಟ್ಟಿ : ಎಲೆಗಳನ್ನು ಸ್ವಲ್ಪ ಎಣ್ಣೆ ಅಥವಾ ತುಪ್ಪದಲ್ಲಿ ಬಾಡಿಸಬೇಕು. ಎರಡು ಕರಿಮೆಣಸು, 4-5 ಒಣಮೆಣಸಿನಕಾಯಿ, ಸ್ವಲ್ಪ ಒಣಕೊಬ್ಬರಿ ತುರಿ, ಹುಣಸೇಹಣ್ಣು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ರುಬ್ಬಿಕೊಳ್ಳಬೇಕು. ಕೆಮ್ಮು ಮತ್ತು ಜ್ವರ ಇರುವವರಿಗೆ ಈ ಚಟ್ಟಿ ತುಂಬ ಉಪಯುಕ್ತ

 ಭಜಿ : ದೊಡ್ಡಪತ್ರೆ ಎಲೆ, ಕಡಲೆಹಿಟ್ಟು, ಸ್ವಲ್ಪ ಅಕ್ಕಿಹಿಟ್ಟು, ಒಣಮೆಣಸಿನಕಾಯಿ ಪುಡಿ, ಉಪ್ಪು, ಎಣ್ಣೆ ಇವೆಲ್ಲವೂ ಬೇಕು ಎಲೆಗಳನ್ನು ತೊಳೆದು ಒರೆಸಿಟ್ಟುಕೊಳ್ಳಬೇಕು. ಕಡಲೆಹಿಟ್ಟು, ಅಕ್ಕಿಹಿಟ್ಟು, ಒಣಮೆಣಸಿನ ಪುಡಿ, ಉಪ್ಪು ಮತ್ತು ಸ್ವಲ್ಪ ಕಾಯ್ದ ಎಣ್ಣೆ ಸೇರಿಸಿ ಅದಕ್ಕೆ ನೀರು ಬೆರೆಸಿ ಹಿಟ್ಟು ತಯಾರಿಸಿಟ್ಟುಕೊಳ್ಳಬೇಕು. ನಂತರ ಹಿಟ್ಟಿನಲ್ಲಿ ಎಲೆಗಳನ್ನು ಅದ್ದಿ ಕಾಯಿಸಿದ ಎಣ್ಣೆಗೆ ಹಾಕಿ ಕೆಂಪಗೆ ಕರಿಯಬೇಕು. ಇದು ತುಂಬ ರುಚಿಕರ, ಇತರ ಭಜಿಗಳಿಗಿಂತ ಇದು ಆರೋಗ್ಯಕರವಾಗಿರುತ್ತದೆ.

 ಮೊಸರು ಬಜ್ಜಿ: ದೊಡ್ಡಪತ್ರೆಯ ಎಲೆಗಳನ್ನು ತೊಳೆದು ಸ್ವಚ್ಛಗೊಳಿಸಿ ಸಣ್ಣಗೆ ಹೆಚ್ಚಿಕೊಂಡು ಸ್ವಲ್ಪ ಎಣ್ಣೆಯಲಿ ಹುರಿದುಕೊಳ್ಳಬೇಕು. ನಂತರ ಅದನ್ನು ಮೊಸರಿನಲ್ಲಿ ಬೆರೆಸಿ ರುಚಿಗೆ ತಕ್ಕಷ್ಟು ಉಪ್ಪು ಬೆರೆಸಬೇಕು. ರೊಟ್ಟಿ, ಚಪಾತಿಯೊಂದಿಗೆ ತಿನ್ನಬಹುದು. ಒಗ್ಗರಣೆ ಹಾಕಿದಲ್ಲಿ ರುಚಿಯಾಗಿರುತ್ತದೆ.

 ಚಿತ್ರಾನ್ನ : ದೊಡ್ಡಪತ್ರ 15 ಎಲೆ, ಅನ್ನ ಒಂದು ಬಟ್ಟಲು, ಈರುಳ್ಳಿ 1, ಹಸಿಮೆಣಸಿನಕಾಯಿ 5. ಉದ್ದಿನಬೇಳೆ 2 ಚಮಚೆ, ಕಡಲೆಬೇಳೆ 2 ಚಮಚೆ, ಸಾಸುವೆ ಅರ್ಧ ಚಮಚ, ಕರಿಬೇವು, ಸ್ವಲ್ಪ, ಕೊತ್ತಂಬರಿ ಸೊಪ್ಪು ಸ್ವಲ್ಪ, ತೆಂಗಿನಕಾಯಿಯ ತುರಿ 14 ಬಟ್ಟಲು, ಶೇಂಗಾ ಬೀಜ ಸ್ವಲ್ಪ, ನಿಂಬೆಹಣ್ಣು ಅರ್ಧ ಹೋಳು, ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ ಅಗತ್ಯಕ್ಕೆ ತಕ್ಕಷ್ಟು.

   ಅನ್ನವನ್ನು ಉದುರುದುರಾಗಿ ಮಾಡಿಟ್ಟುಕೊಳ್ಳಬೇಕು. ಒಲೆಯ ಮೇಲೆ ಬಾಣಲೆಯಿಟ್ಟು ಒಗ್ಗರಣೆ ಹಾಕಿ ಸಾಸುವೆ ಸಿಡಿಸಿ, ಬೇಳೆಗಳು ಮತ್ತು ಮಣಸಿನಕಾಯಿ ಹುರಿದುಕೊಳ್ಳಬೇಕು.ನಂತರ ಸಣ್ಣಗೆ ಹೆಚ್ಚಿದ ಈರುಳ್ಳಿ, ಸ್ವಚ್ಛವಾಗಿ ತೊಳೆದು ಹೆಚ್ಚಿದ ದೊಡ್ಡಪತ್ರ ಸೇರಿ, ಹುರಿಯಬೇಕು ನಂತರ ಅದಕ್ಕೆ ಅನ್ನ ಸೇರಿಸಿ ಕಲೆಸಬೇಕು ಉಪ್ಪು, ನಿಂಬೆರಸ, ಹೆಚ್ಚಿದ ಕೊತ್ತಂಬರಿ ಸೊಪ್ಪು ಕಾಯಿ ತುರಿ ಎಲ್ಲವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ  ಕೆಳಗಿಳಿಸಬೇಕು ರುಚಿಕರ ಆರೋಗ್ಯಕರ ಚಿತ್ರಾನ್ನ ಸಿದ್ದ

10. ತೊಕ್ಕು : ದೊಡ್ಡಪತ್ರೆ ಎಲೆ 4 ಹಿಡಿ ಒಣಮೆಣಸಿನಕಾಯಿ ಹತ್ತು ಬೆಲ್ಲ ಸ್ವಲ್ಪ ಹುಣಸೆಹಣ್ಣು ಸ್ವಲ್ಪ, ಉಪ್ಪು ಚಮಚೆ, ಬೆಳ್ಳುಳ್ಳಿ ಎಸಳು ಶುಂಠಿ ಒಂದು ಚಿಕ್ಕ ತುಂಡು ಎಣ್ಣೆ ಅಗತ್ಯಕ್ಕೆ ತಕ್ಕಷ್ಟು, ಸಾಸುವೆ ಒಂದು ಚಮಚೆ, ಹಿಂಗು ಸ್ವಲ್ಪ, ಜೀರಿಗೆ ಚಮಚ ಉಪ್ಪು ರುಚಿಗೆ ತಕ್ಕಷ್ಟು,

‘             ದೊಡ್ಡ ಪತ್ರೆ ಎಲೆಗಳನ್ನು ಉಪ್ಪು ಹಾಕಿದ ನೀರಿನಲ್ಲಿ ತೊಳೆದು ಬಟ್ಟೆಯ ಮೇಲೆ ಹರಡಿ ತೇವವನ್ನು ಒರೆಸಬೇಕು. ಇದರ ಜೊತೆಗೆ ಒಗ್ಗರಣೆಯ ಪದಾರ್ಥವನ್ನು ಹೊರತುಪಡಿ, ಉಳಿದೆಲ್ಲವನ್ನೂ ಸೇರಿಸಿ ಸ್ವಲ್ಪ ನೀರು ಹಾಕಿ ರುಬ್ಬಕೊಳ್ಳಬೇಕು ನಂತರ ಬಾಣಲೆಯಲ್ಲಿ ಒಗ್ಗರಣೆ  ಹಾಕಿ ಅದಕ್ಕೆ ರುಬ್ಬಿದ ಮಿಶ್ರಣ ಸೇರಿಸಿ ಮುದ್ದೆ ಆಗುವ ತನಕ ಹುರಿಯಬೇಕು ಅದು ಚೆನ್ನಾಗಿ ಆರಿದ ನಂತರ ಸ್ವಚ್ಛವಾದ ಗಾಜಿನ ಇಲ್ಲವೇ ಪಿಂಗಾಣಿ ಜಾಡಿಯಲ್ಲಿ   ತುಂಬಿಟ್ಟುಕೊಳ್ಳಬೇಕು ಈ ತೊಕ್ಕು ಅನ್ನ, ರೊಟ್ಟಿ, ಚಪಾತಿಯೊಂದಿಗೆ ತಿನ್ನಲು ಕುಂಬ ರುಚಿಯಾಗಿರುತ್ತದೆ.