ಮುಂಬೈ : ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ದುರಂತದಿಂದಾಗಿ ತವರು ಕ್ರೀಡಾಂಗಣ ಬದಲಾಯಿತಿಸಲು ಮುಂದಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಗೆ ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಶಾಕ್ ಕೊಟ್ಟಿದೆ. ಐಪಿಎಲ್ನ 5 ತವರು ಪಂದ್ಯಗಳಿಗಾಗಿ ಮುಂಬೈನ ಡಿವೈ ಪಾಟೀಲ ಕ್ರೀಡಾಂಗಣ ಬಳಕೆಗೆ ಎನ್ಒಸಿ ನೀಡಲು ಮುಂಬೈ ಕ್ರಿಕೆಟ್ ಅಸೋಸಿಯೇಷನ್ ನಿರಾಕರಿಸಿದೆ ಎಂದು ತಿಳಿದುಬಂದಿದೆ.
2025 ರ ಆವೃತ್ತಿಯಲ್ಲಿ ಐಪಿಎಲ್ ಟ್ರೋಫಿ ಗೆದ್ದ ಆರ್ಸಿಬಿ ವಿಜಯೋತ್ಸವ ಆಚರಣೆ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ದುರಂತ ನಡೆದಿತ್ತು. ಈ ವೇಳೆ 11 ಅಭಿಮಾನಿಗಳು ಅಸುನೀಗಿದ್ದರು. ಆದ್ದರಿಂದ 2026 ರ ಟೂರ್ನಿ ವೇಳೆ 5 ಪಂದ್ಯಗಳಿಗೆ ತವರು ಕ್ರೀಡಾಂಗಣ ಬದಲಾಯಿಸಲು ಆರ್ಸಿಬಿ ನಿರ್ಧರಿಸಿತ್ತು. ನವೀ ಮುಂಬೈನ ಡಿವೈ ಪಾಟೀಲ ಕ್ರೀಡಾಂಗಣ ಹಾಗೂ ಪುಣೆ ಮೈದಾನಕ್ಕೆ ಆರ್ಸಿಬಿ ಮ್ಯಾನೇಜ್ಮೆಂಟ್ ಭೇಟಿ ನೀಡಿತ್ತು.
ಪುಣೆ ಮೈದಾನವನ್ನ ರಾಜಸ್ಥಾನ ರಾಯಲ್ಸ್ ತಂಡ ತವರು ಕ್ರೀಡಾಂಗಣವಾಗಿ ಆಯ್ಕೆ ಮಾಡಿಕೊಂಡಿದೆ. ಹಾಗಾಗಿ 5 ತವರು ಪಂದ್ಯಗಳಿಗಾಗಿ ಡಿವೈ ಪಾಟೀಲ ಕ್ರೀಡಾಂಗಣಕ್ಕೆ ಫ್ರಾಂಚೈಸಿ ಮನವಿ ಮಾಡಿತ್ತು. ಆದರೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಈ ಮೈದಾನವನ್ನ ಬಳಕೆ ಮಾಡಿಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ ಆರ್ಸಿಬಿಗೆ ಎನ್ಒಸಿ ನಿರಾಕರಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಮತ್ತೊಂದು ಕಡೆ ಆರ್ಸಿಬಿ ಪಂದ್ಯಗಳನ್ನ ಬೆಂಗಳೂರಿನಲ್ಲೇ ನಡೆಸಲು ಕೆಎಸ್ಸಿಎ ಎಲ್ಲಿಲ್ಲದ ಕಸರತ್ತು ನಡೆಸುತ್ತಿದೆ.
ಈ ಸಂಬಂಧ ಗುರುವಾರ (ಫೆ.12) ರಂದು ಉನ್ನತ ಮಟ್ಟದ ಸಭೆ ನಡೆಯಲಿದೆ. ಅದಕ್ಕೂ ಮುನ್ನ ಇಂದು (ಫೆ.11) ಜಿಬಿಎ ಮುಖ್ಯ ಆಯುಕ್ತರ ನೇತೃತ್ವದಲ್ಲಿ ಗೃಹ ಸಚಿವರು ನೇಮಕ ಮಾಡಿದ್ದ ಸಮಿತಿ ಸಲ್ಲಿಸಿರುವ ವರದಿಯನ್ನ ಅಂತಿಮಗೊಳಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಒಟ್ಟಿನಲ್ಲಿ, ಎಲ್ಲವೂ ಅಂದುಕೊಂಡಂತೆ ನಡೆದರೆ, ಕೋಟ್ಯಂತರ ಆರ್ಸಿಬಿ ಅಭಿಮಾನಿಗಳ ನಿರೀಕ್ಷೆಯಂತೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ 2026 ರ ಐಪಿಎಲ್ ಆವೃತ್ತಿ ಉದ್ಘಾಟನೆ ಆಗಲಿದೆ.














