ಬೆಂಗಳೂರು: ಪತಿ ಅಥವಾ ಪತ್ನಿ ಬದುಕಿರುವಾಗಲೇ ಮತ್ತೊಂದು ಮದುವೆಯಾಗುವುದು ಭಾರತೀಯ ದಂಡ ಸಂಹಿತೆ ಸೆಕ್ಷನ್ 494, 495 ಮತ್ತು 496 ಅನ್ವಯ ಅಪರಾಧ. ಇದರಲ್ಲಿ ತಪ್ಪಿತಸ್ಥ ಪತಿ ಅಥವಾ ಪತ್ನಿ ವಿರುದ್ಧ ಮಾತ್ರ ಕಾನೂನು ಕ್ರಮ ಜರುಗಿಸಬಹುದೇ ವಿನಃ ಕುಟುಂಬ ಸದಸ್ಯರನ್ನು ಒಳಪಡಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಮರು ಮದುವೆ, ವಂಚನೆ, ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ತಮ್ಮ ಕುಟುಂಬ ಸದಸ್ಯರನ್ನೂ ಸೇರಿಸಿ ದಾಖಲಿಸಿರುವ ಎಫ್ಐಆರ್ ಹಾಗೂ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆಯನ್ನು ರದ್ದುಪಡಿಸುವಂತೆ ಕೋರಿ ಶ್ರೀನಿವಾಸ್ ಸಾಗರ್ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಆರ್.ನಟರಾಜ್ ಅವರಿದ್ದ ಏಕಸದಸ್ಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಈಗಾಗಲೆ ಮದುವೆಯಾಗಿರುವ ವಿಚಾರವನ್ನು ಮುಚ್ಚಿಟ್ಟು ತಮ್ಮ ಮಗಳನ್ನು ಮರು ಮದುವೆಯಾಗದ್ದಾನೆ. ಜತೆಗೆ ಆಸ್ತಿ ಖರೀದಿಸಲು ಹಣ ಪಡೆದಿದ್ದಾನೆ ಎಂದು ಶ್ರೀನಿವಾಸ್ ಸಾಗರ್ ವಿರುದ್ಧ 2ನೇ ಪ್ರತಿವಾದಿ ಖಾಸಗಿ ದೂರು ದಾಖಲಿಸಿದ್ದರು. ಕುಟುಂಬ ಸದಸ್ಯರೆಲ್ಲರೂ ಶ್ರೀನಿವಾಸ್ ಜತೆ ಮಗಳ ವಿವಾಹ ಮಾಡುವ ಸಾಮಾನ್ಯ ಉದ್ದೇಶ ಹೊಂದಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ವಿಚಾರಣೆ ನಡೆಸಿದ ವಿಚಾರಣಾ ನ್ಯಾಯಲಯ ಸಿಆರ್ ಪಿಸಿ ಸೆಕ್ಷನ್ 153(ಸಿ) ಅನ್ವಯ ತನಿಖೆಗೆ ಶಿಫಾರಸು ಮಾಡಿತ್ತು. ಸಾಕ್ಷ್ಯ ಪತ್ತೆಯಾದ ಹಿನ್ನೆಲೆಯಲ್ಲಿ ಶ್ರೀನಿವಾಸ್ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದರು.
ನೇರವಾಗಿ ಪತ್ನಿ ದೂರು ದಾಖಲಿಸಿಲ್ಲ: ಐಪಿಸಿ ಸೆಕ್ಷನ್ 494, 495 ಮತ್ತು 496ರ ಅಡಿ ಎಲ್ಲ ಆರೋಪಗಳನ್ನು ಮೊದಲ ಆರೋಪಿಯಾಗಿರುವ ಶ್ರೀನಿವಾಸ್ ವಿರುದ್ಧ ಮಾತ್ರ ಮಾಡಲಾಗಿದೆ. ಉಳಿದ ಆರೋಪಿಗಳ ವಿರುದ್ಧ ಇಲ್ಲ. ಇನ್ನು ಸೆಕ್ಷನ್ 498ಎಗೆ ಸಂಬಂಧಿಸಿದಂತೆ ಮೊದಲ ಆರೋಪಿ ಹಣ ಪಡೆದಿರುವ ಕುರಿತಿದ್ದು, ಇದು ಕುಟುಂಬದ ಇತರ ಸದಸ್ಯರಿಗೆ ಅನ್ವಯಿಸುವುದಿಲ್ಲ ಎಂದು ವಾದಿಸಿದ ಅರ್ಜಿದಾರರ ಪರ ವಕೀಲರು, ಅರ್ಜಿಯಲ್ಲಿ 2ನೇ ಪ್ರತಿವಾದಿಯಾಗಿರುವ ವ್ಯಕ್ತಿಯು ಆರೋಪಿಗೆ ಮಾವನಾಗಿದ್ದಾರೆ. ಆದ್ದರಿಂದ ಈ ಸೆಕ್ಷನ್ಗಳ ಅನ್ವಯ ಪ್ರಕರಣದಲ್ಲಿ ನೇರವಾಗಿ ನೊಂದ ವ್ಯಕ್ತಿಯಲ್ಲ. ಪತಿ ವಿರುದ್ಧ ಪತ್ನಿ ನೇರವಾಗಿ ದೂರು ದಾಖಲಿಸಿಲ್ಲ. ಖಾಸಗಿ ದೂರು ದಾಖಲಿಸುವ ಮುಖೇನ ಕಾನೂನು ಪ್ರಕ್ರಿಯೆ ದುರ್ಬಳಕೆಯಾಗಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.
ಸುಪ್ರೀಂ ಆದೇಶ ಪ್ರಸ್ತಾಪ: ಅರ್ಜಿದಾರರ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ದೂರುದಾರರ ಪರ ವಕೀಲರು, ನೊಂದ ವ್ಯಕ್ತಿ ಎನ್ನುವುದಕ್ಕೆ ಸಂತ್ರಸ್ತ ಪತ್ನಿ ಮಾತ್ರವಲ್ಲದೆ, ಆಕೆಯ ಪಾಲಕರು ಹಾಗೂ ಒಡಹುಟ್ಟಿದವರೂ ಸೇರುತ್ತಾರೆ ಎಂದು ಸುಪ್ರೀಂಕೋರ್ಟ್ ಆದೇಶವನ್ನು ಪ್ರಸ್ತಾಪಿಸಿದರು. ಇದರ ಪ್ರಕಾರ ಆರೋಪಿ ವಿರುದ್ಧ ದೂರು ದಾಖಲಿಸುವ ಅಧಿಕಾರ ಆತನ ಮಾವನಿಗೆ ಇದೆ. ಸತ್ಯ ಮರೆಮಾಚಲು ಆರೋಪಿ ಜತೆ ಕೈಜೋಡಿಸಿದ್ದರಿಂದ ಐಪಿಸಿ ಸೆಕ್ಷನ್ 34ರ ಪ್ರಕಾರ ಕುಟುಂಬ ಸದಸ್ಯರ ವಿರುದ್ಧವೂ ಕಾನೂನು ಕ್ರಮ ಜರುಗಿಸಬಹುದು. ತನಿಖೆ ಇನ್ನೂ ಪ್ರಾಥಮಿಕ ಹಂತದಲ್ಲಿರುವುದರಿಂದ ನ್ಯಾಯಾಲಯ ಮಧ್ಯಪ್ರವೇಶಿಸಬಾರದು ಎಂದು ವಾದಿಸಿದರು.
ನ್ಯಾಯಾಲಯ ಹೇಳಿದ್ದೇನು?
2009ರಲ್ಲೇ ಆರೋಪಿ ಶ್ರೀನಿವಾಸ್ ಸಾಗರ್ ಬೇರೊಂದು ಮದುವೆಯಾಗಿದ್ದು, ಆ ವಿವಾಹವನ್ನು ಅಸಿಂಧುಗೊಳಿಸುವಂತೆ 2020ರಲ್ಲಿ ಅರ್ಜಿ ಸಲ್ಲಿಸಿರುವುದರಿಂದ ಪ್ರತಿವಾದಿಯ ಮಗಳನ್ನು ವಿವಾಹವಾಗುವ ಮುನ್ನವೇ ಆತನಿಗೆ ಮದುವೆಯಾಗಿತ್ತು ಎಂಬುದು ಸ್ಪಷ್ಟವಾಗುತ್ತದೆ. ಹೀಗಾಗಿ ಶ್ರೀನಿವಾಸ್ ತಪ್ಪು ಎಸಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಆದರೆ, 1ನೇ ಆರೋಪಿಯಾಗಿರುವ ಶ್ರೀನಿವಾಸ್ ತನ್ನ ವೈವಾಹಿಕ ಸ್ಥಿತಿಯನ್ನು ತನ್ನ ಮಾವ ಹಾಗೂ ಆತನ ಮಗಳಿಗೆ ತಿಳಿಸಿದ್ದನೆ ಅಥವಾ ಇಲ್ಲವೇ ಎಂಬುದು ವಿಚಾರಣಾ ನ್ಯಾಯಲಯದಲ್ಲಿ ಬಹಿರಂಗಪಡಿಸಬೇಕಿದೆ. ಆದ್ದರಿಂದ ಆರೋಪಿಯ ಕುಟುಂಬ ಸದಸ್ಯರನ್ನೂ ಪ್ರಕರಣದಲ್ಲಿ ಒಳಪಡಿಸಲು ಸಾಕ್ಷ್ಯಾಧಾರಗಳ ಕೊರತೆ ಇದೆ ಎಂದು ಸ್ಪಷ್ಟಪಡಿಸಿದೆ.