ಮನೆ ಸುದ್ದಿ ಜಾಲ ಬಿಗ್​​ಬಾಸ್ ವಿನ್ನರ್​ ಗಿಲ್ಲಿಗೆ ಎದುರಾಯ್ತು ಸಂಕಷ್ಟ, ದೂರು ದಾಖಲು

ಬಿಗ್​​ಬಾಸ್ ವಿನ್ನರ್​ ಗಿಲ್ಲಿಗೆ ಎದುರಾಯ್ತು ಸಂಕಷ್ಟ, ದೂರು ದಾಖಲು

0

ಗಿಲ್ಲಿ ನಟ, ಪ್ರಸ್ತುತ ಕರ್ನಾಟಕದ ಜನಪ್ರಿಯ ಸೆಲೆಬ್ರಿಟಿ. ಬಿಗ್​​ಬಾಸ್ ಕನ್ನಡ ಸೀಸನ್ 12 ಗೆದ್ದಿರುವ ಗಿಲ್ಲಿಗೆ ಎಲ್ಲಿಲ್ಲದ ಜನಪ್ರಿಯತೆ ದೊರೆತಿದೆ. ಗಿಲ್ಲಿ ಹೋದಲ್ಲೆಲ್ಲ ಅಭಿಮಾನಿಗಳು ಸೇರುತ್ತಿದ್ದಾರೆ, ಜಯಕಾರಗಳನ್ನು ಹಾಕುತ್ತಿದ್ದಾರೆ. ಬಿಗ್​​ಬಾಸ್​​ನಲ್ಲಿ ಗಿಲ್ಲಿ ತೋರಿದ ಪ್ರತಿಭೆಯ ಪ್ರದರ್ಶನ ಅವರಿಗೆ ದೊಡ್ಡ ಮಟ್ಟದ ಅಭಿಮಾನಿಗಳನ್ನು ಸಂಪಾದಿಸಿಕೊಟ್ಟಿದೆ. ಬಿಗ್​​ಬಾಸ್ ಗೆಲುವು ಗಿಲ್ಲಿಗೆ ಹಲವು ಹೊಸ ಅವಕಾಶಗಳನ್ನು ಸಹ ತಂದುಕೊಡುತ್ತಿದೆ. ಇವುಗಳ ಜೊತೆಗೆ ಗಿಲ್ಲಿಗೆ ಇದೀಗ ಹೊಸ ಸಂಕಷ್ಟವೊಂದು ಶುರುವಾಗಿದೆ. ಗಿಲ್ಲಿ ವಿರುದ್ಧ ದೂರೊಂದು ದಾಖಲಾಗಿದ್ದು, ಗಿಲ್ಲಿ ನಟಿಸಿರುವ ಸಿನಿಮಾ ಒಂದರ ನಿರ್ಮಾಪಕರು ಗಿಲ್ಲಿ ನಟ ವಿರುದ್ಧ ದೂರು ನೀಡಿದ್ದಾರೆ.

ಗಿಲ್ಲಿ, ಬಿಗ್​​ಬಾಸ್​​ಗೆ ಹೋಗುವ ಮುಂಚೆ ‘ಸರ್ಕಾರಿ ಶಾಲೆ ಎಚ್​​8’ ಹೆಸರಿನ ಸಿನಿಮಾನಲ್ಲಿ ನಟಿಸಿದ್ದರು. ಇದೀಗ ಸಿನಿಮಾ ಬಿಡುಗಡೆ ಇಂದು (ಫೆಬ್ರವರಿ 6) ಆಗಿದೆ. ಈ ಹಂತದಲ್ಲಿ ಗಿಲ್ಲಿಯ ವಿರುದ್ಧ ಸಿನಿಮಾದ ನಿರ್ಮಾಪಕ ತೇಜಸ್ವಿ ಎಸ್ ಅವರು ಫಿಲಂ ಚೇಂಬರ್​​ಗೆ ದೂರು ನೀಡಿದ್ದಾರೆ. ಗಿಲ್ಲಿ, ಸಂಭಾವನೆ ಪಡೆದು ಸಿನಿಮಾನಲ್ಲಿ ನಟಿಸಿದ್ದಾರೆ ಆದರೆ ಸಿನಿಮಾದ ಪ್ರಚಾರಕ್ಕೆ ಬರುತ್ತಿಲ್ಲ ಎಂದು ನಿರ್ಮಾಪಕರು ಆರೋಪಿಸಿದ್ದಾರೆ.

ಸಿನಿಮಾನಲ್ಲಿ ನಾವು ಗಿಲ್ಲಿಗೆ ಪ್ರಮುಖ ಪಾತ್ರ ನೀಡಿದ್ದೀವಿ, ಬಿಗ್​​ಬಾಸ್​​ಗೆ ಹೋಗುವ ಮುಂಚೆಯೇ ಅವರು ಕೇಳಿದಷ್ಟು ಸಂಭಾವನೆಯನ್ನು ಸಹ ಕೊಟ್ಟಿದ್ದೀವಿ. ಆದರೆ ಅವರು ಸಿನಿಮಾದ ಪ್ರಚಾರಕ್ಕೆ ಬರುತ್ತಿಲ್ಲ. ಎಷ್ಟು ಕರೆ ಮಾಡಿದರೂ ಕರೆ ಸ್ವೀಕರಿಸುತ್ತಿಲ್ಲ, ಕನಿಷ್ಟ ನಮ್ಮ ಸಿನಿಮಾದ ಬಗ್ಗೆ ಒಂದು ಸೋಷಿಯಲ್ ಮೀಡಿಯಾ ಪೋಸ್ಟ್ ಸಹ ಹಂಚಿಕೊಂಡಿಲ್ಲ ಎಂದು ನಿರ್ಮಾಪಕ ಆರೋಪ ಮಾಡಿದ್ದಾರೆ. ದೂರು ಸ್ವೀಕಾರ ಮಾಡಿರುವ ಚೇಂಬರ್, ಗಿಲ್ಲಿಯನ್ನು ಕರೆಸಿ ವಿಚಾರಣೆ ನಡೆಸುವ ಸಾಧ್ಯತೆ ಇದೆ.

ಸರ್ಕಾರಿ ಶಾಲೆ ಎಚ್​​8’ ಸಿನಿಮಾವು ಸಸ್ಪೆನ್ಸ್ ಥ್ರಿಲ್ಲರ್ ಕತೆಯನ್ನು ಒಳಗೊಂಡಿದೆ. ಸಿನಿಮಾನಲ್ಲಿ ಗಿಲ್ಲಿ ಮುಖ್ಯವಾದ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಸಿನಿಮಾಕ್ಕೆ ಕತೆ, ಚಿತ್ರಕತೆ ಮತ್ತು ನಿರ್ದೇಶನ ಮಾಡಿರುವುದು ಗುಣ ಹರಿಯಬ್ಬೆ. ಗುಣ ಹರಿಯಬ್ಬೆ, ಮೇಘಶ್ರೀ ಮತ್ತು ಜನಪದ ಕಲಾವಿದ ಮೋಹನ್ ಮುಖ್ಯ ಪಾತ್ರಗಳಲ್ಲಿದ್ದಾರೆ. ಜೊತೆಗೆ ಹಿರಿಯ ನಟ ರಾಘವೇಂದ್ರ ರಾಜ್ ಕುಮಾರ್, ಸುಚೇಂದ್ರ ಪ್ರಸಾದ್, ಜಗಪ್ಪ, ನವಾಜ್, ಸುಶ್ಮಿತ ಜಗಪ್ಪ, ಕಡ್ಡಿ ವಿಶ್ವ, ಜೋತಿರಾಜ್ ಮತ್ತು ನಮ್ರತಾ ಈ ಸಿನಿಮಾನಲ್ಲಿ ನಟಿಸಿದ್ದಾರೆ. ‘ಸರ್ಕಾರಿ ಶಾಲೆ ಎಚ್​​8’ ಸಿನಿಮಾ ಇಂದು (ಫೆಬ್ರವರಿ 6) ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ.