ಬೆಂಗಳೂರು: ಮಾ.28 ರಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ನಾಮಪತ್ರ ಸಲ್ಲಿಕೆ ದಿನ ಸಿಎಂ ಸಿದ್ದರಾಮಯ್ಯ ಮಾತನಾಡಿ, ‘ನಿಮಗೆ ಕಷ್ಟಕ್ಕೆ ಸ್ಪಂದಿಸುವ ಸುರೇಶ್ ಬೇಕೋ?, ಬಿಜೆಪಿಯ ವೈಟ್ ಕಾಲರ್ ಅಭ್ಯರ್ಥಿ ಮಂಜುನಾಥ್ ಬೇಕೋ ಎಂದು ಮತದಾರರಿಗೆ ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಅಭ್ಯರ್ಥಿ ಡಾ. ಮಂಜುನಾಥ್ , ಬಡವರ ಕಣ್ಣೀರು ಒರೆಸುವುದೇ ದೊಡ್ಡ ಕಾಲರ್ ಎನ್ನುವ ಮೂಲಕ ಟಾಂಗ್ ಕೊಟ್ಟಿದ್ದಾರೆ.
ನಿತ್ಯ 10 ಸಾವಿರ ಹೆಜ್ಜೆ ಹಾಕುವುದು ನನ್ನ ದಿನಚರಿಯಾಗಿದ್ದು, ಅದರಲ್ಲಿ 5 ಸಾವಿರ ಹೆಜ್ಜೆ ಆಸ್ಪತ್ರೆಯಲ್ಲೇ ಹಾಕುತ್ತಿದ್ದೆ. ನಾನು ಎಸಿ ರೂಂನಲ್ಲಿ ಕೂರುತ್ತಿರಲಿಲ್ಲ. ಬಡವರು, ರೈತರು ಸೇರಿದಂತೆ ಶೇಕಡಾ 80% ರಷ್ಟು ಗ್ರಾಮೀಣ ಜನರಿಗೆ ಚಿಕಿತ್ಸೆ ನೀಡಿದ್ದೇನೆ. ಇನ್ನು ನಾನು ನಿರ್ದೇಶಕನಾಗಿದ್ದಾಗ ಏರ್ ಕಂಡೀಷನ್ ಕೊಠಡಿಯಲ್ಲಿ ಕೂತಿರಲಿಲ್ಲ. ಪ್ರತಿದಿನ ಆಸ್ಪತ್ರೆಯಲ್ಲಿ ಜನತಾ ದರ್ಶನವನ್ನೇ ಮಾಡುತ್ತಿದ್ದೆ. ಇದೇನೂ ಹೊಸದಲ್ಲ, ಬಡವರ ಕಣ್ಣೀರು ಒರೆಸುವ ಮನಸ್ಥಿತಿಯೇ ದೊಡ್ಡ ಕಾಲರ್ ಎಂದಿದ್ದಾರೆ.
ಇನ್ನು ಈಗಾಗಲೇ ಬಿ ಫಾರಂ ಪಡೆದಿದ್ದೇನೆ, ಏಪ್ರಿಲ್ 4ರಂದು ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ರಾಮನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸುತ್ತೇನೆ. ನನ್ನ ಸುಧೀರ್ಘ ಅವಧಿಯಲ್ಲಿ ಲಕ್ಷಾಂತರ ಬಡ ರೋಗಿಗಳಿಗೆ ಚಿಕಿತ್ಸೆ ಕೊಟ್ಟಿದ್ದೇನೆ. ನಾನು ಬಡವರಿಗೆ, ರೈತರಿಗೆ, ಕೂಲಿ ಕಾರ್ಮಿಕರಿಗೆ ಕೃಷಿಕರಿಗೆ ಹತ್ತಿರ ಇದ್ದೇನೆ ಎಂದು ಹೇಳಿದರು.