ಬಿಹಾರ: ವಿಕಾಸಶೀಲ್ ಇನ್ಸಾನ್ ಪಾರ್ಟಿ (ವಿಐಪಿ) ಮುಖ್ಯಸ್ಥ ಮುಖೇಶ್ ಸಹಾನಿ ಅವರ ತಂದೆ ಜಿತನ್ ಸಹಾನಿ ಅವರನ್ನು ಅಪರಿಚಿತ ದುಷ್ಕರ್ಮಿಗಳು ಬಿಹಾರದ ದರ್ಭಾಂಗಾದಲ್ಲಿ ಹತ್ಯೆ ಮಾಡಿದ್ದಾರೆ.
ಮಾಹಿತಿಯ ಪ್ರಕಾರ, ಸೋಮವಾರ ರಾತ್ರಿ ಘನಶ್ಯಾಂಪುರ್ ಪ್ರದೇಶದಲ್ಲಿನ ಅವರ ವಸತಿ ಗೃಹದಲ್ಲಿ ಜೀತನ್ ಸಹಾನಿ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿ ಹತ್ಯೆಗೈದ ಘಟನೆ ನಡೆದಿದೆ. ಡಿಎಸ್ಪಿ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದೆ.
ಮಂಗಳವಾರ ಬೆಳಗ್ಗೆ ಸಹಾನಿ ಅವರ ಮೃತದೇಹ ಛಿದ್ರಗೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು. ಘಟನೆಯಿಂದ ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ.
ಡಿಎಸ್ಪಿ ಮನೀಶ್ ಚಂದ್ರ ಚೌಧರಿ ಮತ್ತು ಬಿರಾವುಲ್ ಪೊಲೀಸ್ ಠಾಣೆಯ ಇತರ ಅಧಿಕಾರಿಗಳು ಕೂಡ ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ. ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ ಕಳ್ಳತನದ ಉದ್ದೇಶದಿಂದ ದುಷ್ಕರ್ಮಿಗಳ ತಂಡ ಜೀತನ್ ಸಹಾನಿ ಅವರ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿರಬಹುದು ಎಂದು ಅಂದಾಜಿಸಲಾಗಿದೆ. ಮುಖೇಶ್ ಸಹಾನಿ ಅವರ ತಂದೆ ಮನೆಯಲ್ಲಿ ಒಬ್ಬರೇ ಇದ್ದಾಗ ಈ ಘಟನೆ ನಡೆದಿದೆ.
ಘಟನೆ ಕುರಿತು ಕೇಂದ್ರ ಸಚಿವ ಮತ್ತು ಎಲ್‌ಜೆಪಿ (ಆರ್‌ವಿ) ಚಿರಾಗ್ ಪಾಸ್ವಾನ್ ಅವರು ಪ್ರತಿಕ್ರಿಯೆ ನೀಡಿದ್ದು ಮುಖೇಶ್ ಸಹಾನಿ ಅವರ ತಂದೇಹ ಹತ್ಯೆ ಖಂಡನೀಯ ಕೊಲೆ ಮಾಡಿದವರು ಯಾರೇ ಆಗಿದ್ದರು ಪೊಲೀಸರು ಅವರನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ಘಟನೆ ನಡೆದ ವೇಳೆ ಮುಖೇಶ್ ಮುಂಬೈ ನಲ್ಲಿದ್ದರು ಎನ್ನಲಾಗಿದ್ದು ವಿಷಯ ತಿಳಿಯುತ್ತಿದ್ದಂತೆ ಮುಂಬೈಯಿಂದ ಪುಣೆ ತಲುಪಿ ಬಳಿಕ ದರ್ಭಾಂಗ ತಲುಪಲಿದ್ದಾರೆ ಎಂದು ಪಕ್ಷದ ನಾಯಕರು ಮಾಹಿತಿ ನೀಡಿದ್ದಾರೆ.
ಘಟನೆಗೆ ಸಂಬಂಧ ತನಿಖೆಗಾಗಿ ಮೂವರು ಸದಸ್ಯರ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ ಎಂದು ಹಿರಿಯ ಅಧಿಕಾರಿ ರೆಡ್ಡಿ ಹೇಳಿದ್ದಾರೆ.