ಮನೆ ಅಪರಾಧ ಬೈಕ್‌ ಡಿಕ್ಕಿ: ರಾತ್ರಿಯಿಡೀ ರಸ್ತೆಯಲ್ಲಿ ನರಳಿ ವ್ಯಕ್ತಿ ಸಾವು

ಬೈಕ್‌ ಡಿಕ್ಕಿ: ರಾತ್ರಿಯಿಡೀ ರಸ್ತೆಯಲ್ಲಿ ನರಳಿ ವ್ಯಕ್ತಿ ಸಾವು

0

ಬೆಂಗಳೂರು: ಅಪರಿಚಿತ ಬೈಕ್‌ ಡಿಕ್ಕಿ ಹೊಡೆದ ಪರಿಣಾಮ ಖಾಸಗಿ ಸುದ್ದಿವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದ ಸೆಕ್ಯುರಿಟಿ ಗಾರ್ಡ್‌ ಮೃತಪಟ್ಟಿರುವ ಘಟನೆ ಕೆಂಗೇರಿ ಉಪನಗರ ಮುಖ್ಯರಸ್ತೆಯಲ್ಲಿ ನಡೆದಿದೆ.

Join Our Whatsapp Group

ಶಿವಯೋಗಿ (52) ಮೃತ ದುರ್ದೈವಿ.

ಗದಗ ಜಿಲ್ಲೆ ಮೂಲದ ಶಿವಯೋಗಿ ಕುಟುಂಬ ಸದಸ್ಯರೊಂದಿಗೆ ಸುಮಾರು 25 ವರ್ಷಗಳಿಂದ ಕೆಂಗೇರಿ ಉಪನಗರದ ಬಳಿಯ ಕೃಷ್ಣನಗರದಲ್ಲಿ ವಾಸವಾಗಿದ್ದಾರೆ. ಖಾಸಗಿ ಸುದ್ದಿ ವಾಹಿನಿಯ ಕಚೇರಿಯಲ್ಲಿ ಸೆಕ್ಯುರಿಟಿ ಗಾರ್ಡ್‌ ಆಗಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.

ಕೆಂಗೇರಿ ಉಪನಗರ ಮುಖ್ಯರಸ್ತೆಯ ಹೊಯ್ಸಳ ಸರ್ಕಲ್ ಸಮೀಪ ಮಂಗಳವಾರ ಸಂಜೆ ರಸ್ತೆ ದಾಟುತ್ತಿದ್ದ ಶಿವಯೋಗಿಗೆ ಬೈಕ್‌ ಡಿಕ್ಕಿ ಹೊಡೆದಿತ್ತು. ಅದರಿಂದ ಅವರ ಕೈ-ಕಾಲುಗಳಿಗೆ ಪೆಟ್ಟಾಗಿತ್ತು ಮತ್ತು ತಲೆಯ ಒಳ ಭಾಗದಲ್ಲಿ ರಕ್ತಸ್ರಾವವಾಗಿತ್ತು. ನಂತರ ಸ್ಥಳೀಯರು ಅವರಿಗೆ ನೀರು ಕುಡಿಸಿ, ರಸ್ತೆ ಬದಿಯಲ್ಲಿ ಕೂರಿಸಿ ಹೋಗಿದ್ದರು. ನಿತ್ರಾಣಗೊಂಡಿದ್ದ ಶಿವಯೋಗಿ ರಸ್ತೆ ಬದಿಯ ಮರದ ಬಳಿ ಹೋಗಿ ಮಲಗಿದ್ದರು. ರಾತ್ರಿಯಿಡೀ ಅಲ್ಲಿಯೇ ಕಳೆದಿದ್ದ ಅವರು ಬೆಳಗಾಗುವಷ್ಟರಲ್ಲಿ ಮೃತಪಟ್ಟಿದ್ದಾರೆ. ಸ್ಥಳೀಯರು ಶಿವಯೋಗಿ ಮೃತಪಟ್ಟಿರುವುದನ್ನು ಗಮನಿಸಿ ಬುಧವಾರ ಬೆಳಗ್ಗೆ ಠಾಣೆಗೆ ಮಾಹಿತಿ ನೀಡಿದರು ಎಂದು ಪೊಲೀಸರು ಹೇಳಿದರು.

ಶಿವಯೋಗಿ ಅವರನ್ನು ಸಕಾಲದಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರೆ ಅವರು ಬದುಕುಳಿಯುವ ಸಾಧ್ಯತೆ ಇತ್ತು. ಆದರೆ, ಬೈಕ್‌ ಸವಾರ ಅಪಘಾತದ ನಂತರ ವಾಹನ ನಿಲ್ಲಿಸದೆ ಪರಾರಿಯಾಗಿದ್ದಾನೆ. ಮತ್ತೂಂದೆಡೆ ಸ್ಥಳೀಯರು ಶಿವಯೋಗಿ ಅವರನ್ನು ಆಸ್ಪತ್ರೆಗೆ ದಾಖಲಿಸಿಲ್ಲ. ಅಪಘಾತಕ್ಕೆ ಕಾರಣನಾದ ಬೈಕ್‌ ಸವಾರನ ಪತ್ತೆ ಕಾರ್ಯ ಮುಂದುವರಿದಿದೆ. ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ದೃಶ್ಯಾವಳಿಯನ್ನು ಪರಿಶೀಲಿಸಲಾಗುತ್ತಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದರು. ಈ ಸಂಬಂಧ ಕೆಂಗೇರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.