ಮಂಗಳೂರು : ಆಂಬುಲೆನ್ಸ್ಗೆ ದಾರಿ ಬಿಡದೇ ಪುಂಡಾಟ ಮಾಡಿದ್ದ ಬೈಕ್ ಸವಾರನನ್ನು ಪೊಲೀಸರು ಅರೆಸ್ಟ್ ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ ರೋಡ್ನಲ್ಲಿ ನಡೆದಿದೆ.
ಬಂಧಿತ ಬೈಕ್ ಸವಾರನನ್ನು ಪುತ್ತೂರಿನ ಬೆಟ್ಟಂಪಾಡಿ ಗ್ರಾಮದ ಮಹಮ್ಮದ್ ಮನ್ಸೂರು (38) ಎಂದು ಗುರುತಿಸಲಾಗಿದೆ. ನೆನ್ನೆ (ಗುರುವಾರ) ಬಿಸ್ಲೆ ಘಾಟ್ ಬಳಿ ನಡೆದ ಅಪಘಾತದಲ್ಲಿ ಗಾಯಾಗೊಂಡಿದ್ದವರನ್ನು ಆಂಬುಲೆನ್ಸ್ನಲ್ಲಿ ಕರೆದೊಯ್ಯುತ್ತಿದ್ದರು.
ಈ ವೇಳೆ ಬಿ.ಸಿ.ರೋಡ್ ಬಳಿ ಬೈಕ್ ಸವಾರನೋರ್ವ ಮೂರ್ನಾಲ್ಕು ಕಿ.ಮೀವರೆಗೆ ಆಂಬುಲೆನ್ಸ್ಗೆ ದಾರಿ ಬಿಡದೇ ಪುಂಡಾಟ ಮಾಡಿದ್ದ. ಈ ವಿಡಿಯೋವನ್ನು ಆಂಬುಲೆನ್ಸ್ ಸಿಬ್ಬಂದಿ ವೈರಲ್ ಮಾಡಿದ್ದ ಎನ್ನಲಾಗಿದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಸವಾರನನ್ನು ಪೊಲೀಸರು ಬಂಧಿಸಿ, ಬೈಕ್ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.















