ಮಳವಳ್ಳಿ: ತಾಲ್ಲೂಕಿನ ಮಿಕ್ಕೆರೆ ಗ್ರಾಮದ ತಿರುವಿನಲ್ಲಿ ಬೈಕ್ ಗೆ ಸಾರಿಗೆ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ (ಸೆಪ್ಟೆಂಬರ್ 2) ಬೆಳಿಗ್ಗೆ ಸಂಭವಿಸಿದೆ.
ದೋರನಹಳ್ಳಿ ಗ್ರಾಮದ ಸ್ವಾಮಿ ಎಂಬುವವರ ಪುತ್ರ ಮುನೇಶ(26) ಮೃತ ದುರ್ದೈವಿ.
ಮುನೇಶ ತಮ್ಮ ಬೈಕ್ ನಲ್ಲಿ ಸ್ನೇಹಿತನೊಂದಿಗೆ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಕಿರುಗಾವಲು ಕಡೆಯಿಂದ ಬರುತ್ತಿದ್ದ ಸಾರಿಗೆ ಬಸ್ ಮಿಕ್ಕೆರೆ ಗ್ರಾಮದ ತಿರುವಿನಲ್ಲಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಮುನೇಶ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಹಿಂಬದಿ ಸವಾರ ಬೆಂಗಳೂರು ಮೂಲದ ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಘಟನಾ ಸ್ಥಳಕ್ಕೆ ಕಿರುಗಾವಲು ಪಿಎಸ್ಐ ಡಿ.ರವಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಗಿದೆ.
ಈ ಸಂಬಂಧ ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Saval TV on YouTube