ಬೆಂಗಳೂರು: ಮೋಜಿನ ಜೀವನಕ್ಕಾಗಿ ಮನೆ ಮುಂದೆ ಹಾಗೂ ರಸ್ತೆ ಬದಿ ನಿಲುಗಡೆ ಮಾಡಿದ್ದ ದುಬಾರಿ ಮೌಲ್ಯದ ಬೈಕ್‌ಗಳ ಕಳವು ಮಾಡುತ್ತಿದ್ದ ತಮಿಳುನಾಡು ಮೂಲದ ಇಬ್ಬರು ಸೇರಿ ನಾಲ್ವರು ಆರೋಪಿಗಳನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ರವಿಚಂದ್ರ ಅಲಿಯಾಸ್ ಕುಂಟ (21), ಮೋಹನ್ ಕುಮಾರ್ ಅಲಿಯಾಸ್ ಬುಲೆಟ್ (29) ಬೆಂಗಳೂರಿನ ನಾಗನಾಥಪುರ ನಿವಾಸಿ ಗೋವಿಂದರಾಜು ಅಲಿಯಾಸ್ ಶಿವ (19) ಮತ್ತು ಗೋವಿಂದಶೆಟ್ಟಿ ಪಾಳ್ಯದ ಅಮೃತ್ ಕುಮಾರ್ (26) ಬಂಧಿತರು.
ಆರೋಪಿಗಳಿಂದ 45 ಲಕ್ಷ ರೂ. ಮೌಲ್ಯದ 31 ಬೈಕ್‌ಗಳು ಹಾಗೂ 10 ಗ್ರಾಂ ತೂಕದ ಚಿನ್ನದ ಸರ ಹಾಗೂ 1 ಕಾರು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.
ಆರೋಪಿಗಳ ಪೈಕಿ ಮೋಹನ್ ಕುಮಾರ್ ವಿರುದ್ಧ ಹೊಸೂರು ಠಾಣೆಯಲ್ಲಿ ರಾಬರಿ ಪ್ರಕರಣ ಹಾಗೂ ಮತ್ತೂಬ್ಬ ಆರೋಪಿ ಅಮೃತ್ ಕುಮಾರ್ ವಿರುದ್ಧ ಕೃಷ್ಣಗಿರಿ ಜಿಲ್ಲೆಯ ಠಾಣೆಯೊಂದರಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದ್ದು, ಬಂಧನಕ್ಕೊಳಗಾಗಿದ್ದರು. ಬಳಿಕ ಜಾಮೀನು ಪಡೆದು ಬಿಡುಗಡೆಯಾಗಿ, ಮತ್ತೆ ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಇನ್ನು ಇತರೆ ಇಬ್ಬರು ಆರೋಪಿಗಳ ವಿರುದ್ಧ ಬೇರೆ ಬೇರೆ ಠಾಣೆಗಳಲ್ಲಿ ವಿವಿಧ ಪ್ರಕರಣಗಳು ದಾಖಲಾಗಿರುವ ಮಾಹಿತಿಯಿದ್ದು, ಪರಿಶೀಲಿಸಲಾಗುತ್ತಿದೆ.
ಆರೋಪಿಗಳು ಇತ್ತೀಚೆಗೆ ಠಾಣೆ ವ್ಯಾಪ್ತಿಯಲ್ಲಿ ಮನೆ ಮುಂದೆ ನಿಲುಗಡೆ ಮಾಡಿದ್ದ ಬುಲೆಟ್ ಕಳವು ಮಾಡಿದ್ದರು ಎಂದು ಪೊಲೀಸರು ಹೇಳಿದರು.
ನಾಲ್ವರು ಆರೋಪಿಗಳು ಮೂಲತಃ ತಮಿಳುನಾಡಿನವರು. ಈ ಪೈಕಿ ಗೋವಿಂದರಾಜು ಮತ್ತು ಅಮೃತ್‌ಕುಮಾರ್ ನಗರಕ್ಕೆ ಬಂದು ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದರು. ಈ ಮಧ್ಯೆ ತಮಿಳುನಾಡಿನ ತಮ್ಮ ಸ್ನೇಹಿತರ ಜತೆ ಸಂಚು ರೂಪಿಸಿ ಕೃತ್ಯ ಎಸಗುತ್ತಿದ್ದರು ಎಂಬುದು ಗೊತ್ತಾಗಿದೆ. ತಮಿಳುನಾಡಿನಲ್ಲಿಯೇ ಒಂದು ಕಾರು ಬಾಡಿಗೆಗೆ ಪಡೆದುಕೊಂಡು, ಬೆಂಗಳೂರಿಗೆ ಬರುತ್ತಿದ್ದ ನಾಲ್ವರು ಆರೋಪಿಗಳು, ಒಂದೊಂದು ದಿಕ್ಕುಗಳಿಗೆ ತೆರಳಿ, ಮನೆ ಮುಂದೆ ಮತ್ತು ರಸ್ತೆ ಬದಿ ನಿಲುಗಡೆ ಮಾಡಿದ್ದ ಬುಲೆಟ್ ಸೇರಿ ದುಬಾರಿ ಮೌಲ್ಯದ ದ್ವಿಚಕ್ರ ವಾಹನಗಳ ಹ್ಯಾಂಡಲ್ ಲಾಕ್ ಮುರಿದು ಕಳ್ಳತನ ಮಾಡಿಕೊಂಡು ಪರಾರಿಯಾಗುತ್ತಿದ್ದರು.
ಬಳಿಕ ತಮಿಳುನಾಡಿನ ವೇಲೂರು ಜಿಲ್ಲೆಯ ಗುಡಿಯಾತ್ತಂ ತಾಲೂಕಿನ ಅಕ್ಕ-ಪಕ್ಕದ ಗ್ರಾಮಗಳಲ್ಲಿ ಪರಿಚಯಸ್ಥರಿಗೆ ಕಡಿಮೆ ಮೊತ್ತಕ್ಕೆ ಮಾರಿದ್ದಾರೆ. ಹಾಗೆಯೇ ಹೆಬ್ಬಗೋಡಿ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬಸರ ಕಳವು ಮಾಡಿಕೊಂಡು ಹೋಗಿದ್ದರು ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಈ ಹಿನ್ನೆಲೆಯಲ್ಲಿ ಆರೋಪಿಗಳ ಮಾಹಿತಿ ಮೇರೆಗೆ ಸ್ಥಳೀಯ ಪೊಲೀಸರ ಸಹಾಯದಿಂದ ತಮಿಳು ನಾಡಿನ ಗುಡಿಯಾತ್ತಂ, ಮಾದನೂರು, ವಡ್ಡರೆಡ್ಡಿಪಾಳ್ಯ, ಸೇಂಗೋಡ್ರಂ ಗ್ರಾಮಗಳಲ್ಲಿ ಮಾರಾಟ ಮಾಡಿದ್ದ ವಾಹನಗಳು ಹಾಗೂ ನಗರದ ಚಿಕ್ಕನಾಗಮಂಗಲ ನೀಲಗಿರಿ ತೋಪು ಹಾಗೂ ರಾಯಸಂದ್ರದ ಕೆರೆ, ಅತ್ತಿಬೆಲೆ ಟೋಲ್ ಬಳಿ ಸುಮಾರು 45 ಲಕ್ಷ ರೂ. ಮೌಲ್ಯದ 31 ಬೈಕ್ ಹಾಗೂ 10 ಗ್ರಾಂ ಚಿನ್ನದ ಸರ, ಒಂದು ಕಾರು ವಶಕ್ಕೆ ಪಡೆಯಲಾಗಿದೆ.ಆರೋಪಿಗಳು ಮೋಜು ಮಸ್ತಿಗಾಗಿ ಬೈಕ್ ಗಳ ಕಳವು ಮಾಡುತ್ತಿದ್ದರು ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.